ಪ್ಯಾರಿಸ್ ಒಲಿಂಪಿಕ್ಸ್| 50 ಕೆಜಿ ತೂಕ ಕಾಯ್ದುಕೊಳ್ಳಲು ವಿಫಲ: ವಿನೇಶ್ ಫೋಗಟ್ ಅನರ್ಹ
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ 50 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿರುವ ಭಾರತದ ವಿನೇಶ್ ಫೋಗಟ್ ಇಂದು ಭಾರತಕ್ಕೊಂದು ಪದಕವನ್ನು ಗೆದ್ದೇ ಗೆಲ್ಲಲಿದ್ದಾರೆಂದು ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಸಂದರ್ಭದಲ್ಲಿ ಆಘಾತಕರ ಸುದ್ದಿಯೊಂದು ಹೊರಬಿದ್ದಿದೆ.
ಫೈನಲ್ ಇಂದು ನಡೆಯಲಿರುವುದರಿಂದ ಬೆಳಿಗ್ಗೆ ಆಕೆಯ ದೇಹ ತೂಕ ಪರೀಕ್ಷಿಸುವ ಸಂದರ್ಭ ಆಕೆ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿದ್ದಾರೆಂಬುದು ತಿಳಿದು ಬಂದಿದ್ದು, ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಒಲಿಂಪಿಕ್ಸ್ ನಿಯಮದ ಪ್ರಕಾರ ಫೋಗಟ್ ಬೆಳ್ಳಿ ಪದಕಕ್ಕೂ ಅರ್ಹರಾಗುವುದಿಲ್ಲ ಹಾಗೂ 50 ಕೆಜಿ ವಿಭಾಗದಲ್ಲಿ ಕೇವಲ ಚಿನ್ನ ಮತ್ತು ಕಂಚಿನ ಪದಕ ವಿಜೇತರಿರಲಿದ್ದಾರೆ.
ಮಂಗಳವಾರ ಆಕೆಯ ದೇಹತೂಕ ಪರೀಕ್ಷಿಸಿದಾಗ 50 ಕೆಜಿ ಇತ್ತೆನ್ನಲಾಗಿದ್ದು ಆದರೆ ಇಂದು ಆಕೆ 100 ಗ್ರಾಂ ಹೆಚ್ಚು ತೂಗುತ್ತಿದ್ದಾರೆನ್ನಲಾಗಿದೆ.
ಮಂಗಳವಾರ ರಾತ್ರಿ ಆಕೆಯ ತೂಕ 2 ಕೆಜಿ ಹೆಚ್ಚಿದ್ದ ಕಾರಣ ಆಕೆ ಇಡೀ ರಾತ್ರಿ ನಿದ್ರಿಸದೆ ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡಿ ತಮ್ಮಿಂದಾದಷ್ಟು ಪ್ರಯತ್ನ ಮಾಡಿದ್ದರೂ ಅದು ಸಾಕಾಗಿಲ್ಲ. ಭಾರತದ ತಂಡ ಆಕೆಗೆ 100 ಗ್ರಾಂ ತೂಕ ಇಳಿಸಿಕೊಳ್ಳಲು ಸ್ವಲ್ಪ ಸಮಯಾವಕಾಶ ಕೇಳಿದ್ದರೂ ಅಧಿಕಾರಿಗಳು ಕೇಳಿಲ್ಲ ಎನ್ನಲಾಗಿದೆ.
50 ಕೆಜಿ ವಿಭಾಗದಲ್ಲಿ ಈ ರೀತಿ ತೂಕ ಕಾಯ್ದುಕೊಳ್ಳುವ ಸಮಸ್ಯೆ ಎದುರಿಸಿದ್ದು ವಿನೇಶ್ ಫೋಗಟ್ ಇದೇ ಮೊದಲ ಬಾರಿ ಅಲ್ಲ. ಆಕೆ ಸಾಮಾನ್ಯವಾಗಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲೂ ಆಕೆ ಸ್ವಲ್ಪದರಲ್ಲೇ ಅರ್ಹರಾಗಲು ಸಾಧ್ಯವಾಗಿತ್ತು.
ಇಂದಿನ ಫೈನಲ್‌ನಲ್ಲಿ ಫೋಗಟ್ ಅವರು ಸ್ವೀಡನ್ ದೇಶದ ಸಾರಾ ಹಿಲ್ಡೆಬ್ರಾಂಡ್ಟ್ ಅವರನ್ನು ಎದುರಿಸಬೇಕಿತ್ತು.