ಟ್ರಯಲ್ಸ್ ಮಾದರಿಯ ವಿವರ ನೀಡುವಂತೆ ಭಾರತದ ಕುಸ್ತಿ ಒಕ್ಕೂಟಕ್ಕೆ ವಿನೇಶ್ ಫೋಗಟ್ ಮನವಿ

Update: 2024-05-16 16:47 GMT

ವಿನೇಶ್ ಫೋಗಟ್ | PC : PTI

ಚೆನ್ನೈ : ಪ್ಯಾರಿಸ್ ಒಲಿಂಪಿಕ್ಸ್ ಗೆ ಮೂರು ತಿಂಗಳು ಬಾಕಿ ಇದ್ದು ದಿನಾಂಕ, ಸಮಯ ಹಾಗೂ ಸ್ಥಳ ಸಹಿತ ಟ್ರಯಲ್ಸ್ ಮಾದರಿಯ ಕುರಿತು ಮಾಹಿತಿಯನ್ನು ಒದಗಿಸದ ಭಾರತದ ಕುಸ್ತಿ ಫೆಡರೇಶನ್(WFI)ಅನ್ನು ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಕುಸ್ತಿಪಟು ವಿನೇಶ್ ಫೋಗಟ್ ಟೀಕಿಸಿದ್ದಾರೆ.

ಡಬ್ಲ್ಯುಎಫ್ಐ ಹಾಗೂ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್)ಉದ್ದೇಶಿಸಿ ಬರೆದ ಪತ್ರದಲ್ಲಿ ಈ ಕುರಿತು ಕಳವಳ ವ್ಯಕ್ತಪಡಿಸಿರುವ ವಿನೇಶ್ ಈಗಾಗಲೇ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಈ ನಿರ್ಣಾಯಕ ಹಂತದಲ್ಲಿ ಎಲ್ಲ ಅರ್ಹ ಕ್ರೀಡಾಪಟುಗಳು ಒಲಿಂಪಿಕ್ಸ್ ನ ಹಾದಿ ಹಾಗೂ ಪ್ರಕ್ರಿಯೆಯಲ್ಲಿ ಸಂಪೂರ್ಣ ಸ್ಪಷ್ಟತೆ ಹೊಂದಿರುವುದು ಅತ್ಯಗತ್ಯ. ಅಂತಹ ಸ್ಪಷ್ಟತೆಯು ನ್ಯಾಯೋಚಿತ ಸ್ಪರ್ಧೆಯನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ನಮ್ಮ ದೇಶದ ಪದಕಗಳ ಗೆಲ್ಲುವ ಅವಕಾಶವನ್ನು ಹೆಚ್ಚಿಸುತ್ತದೆ. ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಫೋಗಟ್ ಪತ್ರದಲ್ಲಿ ಬರೆದಿದ್ದಾರೆ.

ಭಾರತದ ಕ್ರೀಡಾ ಸಚಿವಾಲಯ, ಐಒಎ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಈ ವಿಷಯಕ್ಕೆ ಸಂಬಂಧಿಸಿದ ಆದ್ಯತೆ ನೀಡುವಂತೆ ನಾನು ವಿನಂತಿಸುತ್ತೇನೆ. ಟ್ರಯಲ್ಸ್ ನ ದಿನಾಂಕ, ಸಮಯ, ಸ್ಥಳ ಹಾಗೂ ನಿಖರವಾದ ಮಾದರಿಯನ್ನು ಅಧಿಕೃತವಾಗಿ ಪ್ರಕಟಿಸುವಂತೆ ನಾನು ವಿನಂತಿಸುತ್ತೇನೆ ಎಂದು ಫೋಗಟ್ ಹೇಳಿದ್ದಾರೆ.

ಭಾರತ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಆರು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದು, ಮಹಿಳಾ ಕುಸ್ತಿಪಟುಗಳು ಐದು ಸ್ಥಾನಗಳನ್ನು ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News