ಐಪಿಎಲ್-2025 | ಆರ್‌ಸಿಬಿ ನಾಯಕತ್ವವಹಿಸಿಕೊಳ್ಳಲು ವಿರಾಟ್ ಕೊಹ್ಲಿ ಸಜ್ಜು : ವರದಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐ ಪಿ ಎಲ್) 2025ರ ಋತುವಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ)ತಂಡದ ನಾಯಕನಾಗಿ ಮರಳಲು ವಿರಾಟ್ ಕೊಹ್ಲಿ ಸರ್ವಸನ್ನದ್ದರಾಗಿದ್ದಾರೆ ಎಂದು ವರದಿಯಾಗಿದೆ.
ಕೊಹ್ಲಿ ಈಗಾಗಲೇ ಮ್ಯಾನೇಜ್ ಮೆಂಟ್‌ನೊಂದಿಗೆ ಚರ್ಚೆ ನಡೆಸಿದ್ದು, ಆರ್ ಸಿ ಬಿ ಪಾಳಯದಲ್ಲಿ ನಾಯಕತ್ವ ಸ್ಥಾನ ತೆರವಾದ ನಂತರ ಅದನ್ನು ತುಂಬಲು ಬಯಸಿದ್ದಾರೆ ಎಂದು ವರದಿಯಾಗಿದೆ.
40ರ ಹರೆಯದ ಎಫ್ ಡು ಪ್ಲೆಸಿಸ್ 2022-24ರಲ್ಲಿ ಆರ್ ಸಿ ಬಿ ಫ್ರಾಂಚೈಸಿಯನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಈಗ ಅವರಿಗೆ ವಯಸ್ಸು ಅಡ್ಡಿಯಾಗಿದ್ದು, ಕೊಹ್ಲಿ ಅವರು ಪ್ಲೆಸಿಸ್ ಸ್ಥಾನ ತುಂಬಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಆರ್ ಸಿ ಬಿ ಈ ತನಕ ಐ ಪಿ ಎಲ್ ಟ್ರೋಫಿಯನ್ನು ಗೆದ್ದುಕೊಂಡಿಲ್ಲ. ಇನ್ನೊಂದು ತಿಂಗಳೊಳಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಿಡ್ಡಿಂಗ್ ವಾರ್ ಆರಂಭವಾಗುವ ಮೊದಲು ನಾಯಕನ ಸ್ಥಾನ ತುಂಬಲು ಆರ್ ಸಿ ಬಿ ಯೋಚಿಸುತ್ತಿದೆ.
ಕೊಹ್ಲಿ ಅವರು 2013ರಿಂದ 2021ರ ತನಕ ಆರ್ ಸಿ ಬಿ ಯ ನಾಯಕನಾಗಿದ್ದರು. ಕೊಹ್ಲಿ ನಾಯಕತ್ವದಲ್ಲಿ ಆರ್ ಸಿ ಬಿ ತಂಡವು 4 ಬಾರಿ ಪ್ಲೇ ಆಫ್ ಸುತ್ತಿಗೇರಿತ್ತು. 2016ರಲ್ಲಿ ಪ್ರಶಸ್ತಿ ಗೆಲ್ಲುವ ಸನಿಹ ತಲುಪಿತ್ತು. ಆದರೆ ಫೈನಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋತಿತ್ತು.
ಭಾರತದ ಟಿ-20 ನಾಯಕತ್ವದ ಸ್ಥಾನವನ್ನು ತ್ಯಜಿಸುವ ನಿರ್ಧಾರ ಪ್ರಕಟಿಸಿದ ಕೆಲವೇ ದಿನಗಳ ನಂತರ 2021ರಲ್ಲಿ 35ರ ಹರೆಯದ ಕೊಹ್ಲಿ ಆರ್ ಸಿ ಬಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. ನನ್ನ ಕೊನೆಯ ಐ ಪಿ ಎಲ್ ಪಂದ್ಯವನ್ನು ಆರ್ ಸಿ ಬಿ ತಂಡದಲ್ಲೇ ಆಡುವೆ. ಬೇರೆ ತಂಡವನ್ನು ಸೇರಿಕೊಳ್ಳುವ ಯೋಚನೆ ಮಾಡಲಾರೆ ಎಂದು ಸ್ಪಷ್ಟಪಡಿಸಿದ್ದರು.
ಐ ಪಿ ಎಲ್ ನಲ್ಲಿ ನನ್ನ ಕೊನೆಯ ಪಂದ್ಯ ಆಡುವ ತನಕವೂ ಆರ್ ಸಿ ಬಿ ಆಟಗಾರನಾಗಿಯೇ ಮುಂದುವರಿಯುವೆ. 9 ವರ್ಷಗಳ ಪಯಣವು ಸಂತೋಷ, ನಿರಾಸೆ, ಖುಷಿ ಹಾಗೂ ದುಃಖದ ಕ್ಷಣಗಳನ್ನು ಹೊಂದಿದ್ದವು. ನನಗೆ ಬೆಂಬಲ ನೀಡಿರುವ, ಸತತವಾಗಿ ನನ್ನ ಮೇಲೆ ನಂಬಿಕೆ ಇರಿಸಿರುವ ನಿಮಗೆಲ್ಲರಿಗೂ ಹೃದಯಾಂತರಾಳದಿಂದ ಧನ್ಯವಾದ ಸಲ್ಲಿಸುವ ಬಯಸುವೆ ಎಂದು ಮೂರು ವರ್ಷಗಳ ಹಿಂದೆ ಕೊಹ್ಲಿ ಹೇಳಿದ್ದರು.
ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ನಾಯಕನ ಸ್ಥಾನದಲ್ಲಿರದಿದ್ದರೂ ಎಫ್ ಡು ಪ್ಲೆಸಿಸ್‌ಗೆ ನಿರ್ಣಾಯಕ ಪರಿಸ್ಥಿತಿಯಲ್ಲಿ ತನ್ನ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ.
ಆರ್ ಸಿ ಬಿ ತಂಡವು ನಾಯಕತ್ವ ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಆದರೆ, ಕೊಹ್ಲಿ ಐ ಪಿ ಎಲ್ ನಲ್ಲಿ ಆರ್ ಸಿ ಬಿಯನ್ನು ಮುನ್ನಡೆಸಬಲ್ಲ ಸೂಕ್ತ ವ್ಯಕ್ತಿಯಾಗಿದ್ದಾರೆ.
ಶುಭಮನ್ ಗಿಲ್ ರತ್ತಲೂ ಆರ್ ಸಿ ಬಿ ತಂಡ ಕಣ್ಣಿಟ್ಟಿದೆ. ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮೆಗಾ ಹರಾಜಿನಲ್ಲಿ ರಿಷಭ್ ಪಂತ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಬಲವಾದ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಪ್ಲೆಸಿಸ್ ನಾಯಕತ್ವದಲ್ಲಿ ಮಿಶ್ರ ಫಲಿತಾಂಶ
ವಿರಾಟ್ ಕೊಹ್ಲಿ 2021ರಲ್ಲಿ ಆರ್ ಸಿ ಬಿ ನಾಯಕತ್ವವನ್ನು ತ್ಯಜಿಸಿದ ನಂತರ ಎಫ್‌ಡು ಪ್ಲೆಸಿಸ್ ನಾಯಕತ್ವದಲ್ಲಿ ಮಿಶ್ರ ಫಲಿತಾಂಶ ಪಡೆದಿತ್ತು.
ಮೂರು ಋತುಗಳ ಪೈಕಿ ಎರಡು ಬಾರಿ ಪ್ಲೇ ಆಫ್‌ಗೆ ತೇರ್ಗಡೆಯಾಗಲು ಶಕ್ತವಾಗಿತ್ತು. ಸ್ಥಿರ ಪ್ರದರ್ಶನ ನೀಡಲು ಪರದಾಟ ನಡೆಸಿರುವ ಆರ್ ಸಿ ಬಿ ತಂಡವು ಚೊಚ್ಚಲ ಐ ಪಿ ಎಲ್ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು.
ಎಫ್‌ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್ ಸಿ ಬಿ 2022ರ ಐ ಪಿ ಎಲ್ ಋತುವಿನಲ್ಲಿ ಎಲಿಮಿನೇಟರ್‌ಗೆ ತೇರ್ಗಡೆಯಾದ ನಂತರ 4ನೇ ಸ್ಥಾನ ಪಡೆದಿತ್ತು. ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಜಯಿಸಿತ್ತು. ಆದರೆ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿತ್ತು.
2023ರ ಋತುವಿನಲ್ಲಿ ಆರ್ ಸಿ ಬಿ 14 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿ 6ನೇ ಸ್ಥಾನ ಪಡೆದಿತ್ತು. ಪ್ಲೇ ಆಫ್‌ಗೆ ತೇರ್ಗಡೆಯಾಗುವಲ್ಲಿ ವಿಫಲವಾಗಿತ್ತು.
2024ರ ಋತುವಿನಲ್ಲಿ ಆರ್ ಸಿ ಬಿ ತಂಡವು ಎಲಿಮಿನೇಟರ್‌ನಲ್ಲಿ ಸ್ಥಾನ ಗಿಟ್ಟಿಸಿ ಮತ್ತೊಮ್ಮೆ 4ನೇ ಸ್ಥಾನ ಪಡೆದಿತ್ತು. ಆದರೆ ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋಲನುಭವಿಸಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.
ಪ್ರಮುಖ ಆಟಗಾರರ ಮೇಲೆ ಹೆಚ್ಚು ಅವಲಂಬನೆ ಹಾಗೂ ಪಂದ್ಯದುದ್ದಕ್ಕೂ ಅಸ್ಥಿರ ಪ್ರದರ್ಶನವು ಆರ್ ಸಿ ಬಿಗೆ ದುಬಾರಿಯಾಯಿತು. ಈ ಎಲ್ಲದರ ಹೊರತಾಗಿಯೂ ದಕ್ಷಿಣ ಆಫ್ರಿಕಾದ ಪ್ಲೆಸಿಸ್ ಅವರು ಗೆಲುವು-ಸೋಲು ಅನುಪಾತದಲ್ಲಿ ಕೊಹ್ಲಿಗಿಂತ ಉತ್ತಮವಾಗಿದ್ದಾರೆ. ಆರ್ ಸಿ ಬಿ ಪರ 42 ಪಂದ್ಯಗಳಲ್ಲಿ ನಾಯಕತ್ವವಹಿಸಿದ್ದ ಪ್ಲೆಸಿಸ್, ಶೇ.50ರಷ್ಟು ವಿನ್ನಿಂಗ್ ರೇಟ್ ಹೊಂದಿದ್ದಾರೆ. ಕೊಹ್ಲಿ 46.15ರಷ್ಟು ಗೆಲುವಿನ ದರ ಹೊಂದಿದ್ದಾರೆ.
ಕೊಹ್ಲಿ ಅವರ ಅನುಭವ, ನಾಯಕತ್ವ ಗುಣಗಳು ಹಾಗೂ ಬದ್ದತೆಯನ್ನು ಅವಲಂಬಿಸಿರುವ ಆರ್ ಸಿ ಬಿ ಫ್ರಾಂಚೈಸಿ, ಮುಂಬರುವ ಅವರ ನಾಯಕತ್ವದಲ್ಲೇ ಐ ಪಿ ಎಲ್ ಅಭಿಯಾನದಲ್ಲಿ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ.