ಜನ್ಮದಿನದಂದು ಶತಕ ಬಾರಿಸಿದ ಭಾರತದ ಮೂರನೇ ಬ್ಯಾಟರ್ ವಿರಾಟ್ ಕೊಹ್ಲಿ
ಕೋಲ್ಕತ್ತ: ಇಲ್ಲಿನ ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಬಾರಿಸಿ ಜನ್ಮದಿನದಂದೇ ಏಕದಿನ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.
ನಿಧಾನಗತಿ ಪಿಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ಮಾಡುವ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು. ಹರಿಣಗಳ ವಿರುದ್ದ 10 ಬೌಂಡರಿ ಸಹಿತ 101 ಬಾರಿಸಿ ಅಜೇಯರಾಗಿ ಉಳಿದು ತಂಡದ ಮೊತ್ತ ಹೆಚ್ಚಿಸಿದ್ದರು.
ಈ ಹಿಂದೆ ಜನ್ಮದಿನದಂದೇ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಈ ದಾಖಲೆ ಮಾಡಿದ್ದರು. ಸಚಿನ್ ಆಸ್ಟ್ರೇಲಿಯಾ ವಿರುದ್ಧ ಶಾರ್ಜಾದಲ್ಲಿ ಈ ದಾಖಲೆ ನಿರ್ಮಿಸಿದ್ದರು.
ಒಟ್ಟಾರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 7ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಮೂವರು ಭಾರತೀಯರಲ್ಲದೆ, ಸನತ್ ಜಯಸೂರ್ಯ, ರಾಸ್ ಟೇಲರ್, ಟಾಮ್ ಲ್ಯಾಥಮ್ ಮತ್ತು ಮಿಶೆಲ್ ಮಾರ್ಶ್ ತಮ್ಮ ಜನ್ಮದಿನದಂದು ಏಕದಿನ ಶತಕಗಳನ್ನು ಗಳಿಸಿದ್ದಾರೆ.
ಪಂದ್ಯದಲ್ಲಿ ಕೊಹ್ಲಿಯ ಶತಕದ ನೆರವಿನಿಂದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ನಷ್ಟಕ್ಕೆ 326 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು.