ಇಂಗ್ಲೆಂಡ್ ವಿರುದ್ಧದ ಉಳಿದ ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹೊರಗುಳಿಯುವ ಸಾಧ್ಯತೆ

Update: 2024-02-08 15:22 GMT

ವಿರಾಟ್ ಕೊಹ್ಲಿ | Photo; PTI 

ಹೊಸದಿಲ್ಲಿ : ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ವಿರಾಟ್ ಕೊಹ್ಲಿ ಅವರಿಲ್ಲದೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯೋಜನೆ ರೂಪಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಭಾರತದ ಪ್ರಮುಖ ಬ್ಯಾಟರ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಪುನರಾಗಮನ ಮಾಡುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ.

ಸರಣಿಯಲ್ಲಿ ಕೊಹ್ಲಿ ಸ್ವತಃ ಆಡಲು ಬಯಸಿದ್ದಾರೆಯೇ, ಇಲ್ಲವೇ ಎಂದು ತಿಳಿದುಕೊಳ್ಳಲು ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಬಯಸಿದೆ ಎಂದು ಆಂಗ್ಲ ಪತ್ರಿಕೆ ಫೆಬ್ರವರಿ 3 ರಂದು ವರದಿ ಮಾಡಿತ್ತು.

ನನ್ನ ಕುಟುಂಬದೊಂದಿಗೆ ಇರುವ ಅಗತ್ಯವಿದೆ. ರಾಜ್ಕೋಟ್ ಹಾಗೂ ರಾಂಚಿಯಲ್ಲಿ ನಡೆಯಲಿರುವ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ನಾನು ಲಭ್ಯ ಇರುವುದಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಧರ್ಮಶಾಲಾದಲ್ಲಿ ನಡೆಯುವ ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಾಪಸಾಗುವ ಸಾಧ್ಯತೆಯೂ ಇಲ್ಲವಾಗಿದೆ.

ಕೊಹ್ಲಿ ಅವರು ಫೆಬ್ರವರಿ ಮಧ್ಯಭಾಗದಲ್ಲಿ ರಜೆಯನ್ನು ಕೇಳಿದ್ದರು. ಮೊದಲ ಟೆಸ್ಟ್ ಆರಂಭಕ್ಕೆ ಮೂರು ದಿನಗಳಿರುವಾಗ ನನಗೆ ಬೇಗನೆ ರಜೆ ಬೇಕು ಎಂದು ಬಿಸಿಸಿಐಗೆ ಕೊಹ್ಲಿ ಮನವರಿಕೆ ಮಾಡಿದ್ದರು. ಕ್ರಿಕೆಟ್ ಮಂಡಳಿಯು ಯಾವಾಗಲೂ ಅವರ ನಿರ್ಧಾರವನ್ನು ಗೌರವಿಸುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆಯ್ಕೆ ಸಮಿತಿಯು ಮುಂದಿನ 3 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ರಜತ್ ಪಾಟಿದಾರ್ ತಂಡದಲ್ಲಿ ಉಳಿದುಕೊಳ್ಳುವ ನಿರೀಕ್ಷೆ ಇದೆ.

ಟೀಮ್ ಮ್ಯಾನೇಜ್ಮೆಂಟ್ ಶ್ರೇಯಸ್ ಅಯ್ಯರ್ ಮೇಲೆ ಮತ್ತಷ್ಟು ಭರವಸೆ ಇಡಲಿದಯೇ ಅಥವಾ ಹೊಸ ಆಟಗಾರ ಸರ್ಫರಾಝ್ ಖಾನ್ ಗೆ ಮೊದಲ ಟೆಸ್ಟ್ ಪಂದ್ಯವನ್ನಾಡುವ ಅವಕಾಶ ನೀಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಸ್ವದೇಶದಲ್ಲಿ ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಕ್ರಿಕೆಟ್ ದಾಖಲೆ ಉತ್ತಮವಾಗಿದೆ.

ಆಡುವ 11 ಬಳಗದಲ್ಲಿ ಇಬ್ಬರು ಬ್ಯಾಟರ್ ಗಳಾದ ಪಾಟಿದಾರ್ ಹಾಗೂ ಸರ್ಫರಾಝ್ ರನ್ನು ಆಡಿಸುವ ಕುರಿತು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News