ಇಂಗ್ಲೆಂಡ್ ವಿರುದ್ಧ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅಲಭ್ಯ

Update: 2024-02-10 17:23 GMT

ವಿರಾಟ್ ಕೊಹ್ಲಿ | Photo: PTI

ಹೊಸದಿಲ್ಲಿ: ರಾಷ್ಟ್ರೀಯ ಆಯ್ಕೆಗಾರರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಇನ್ನುಳಿದ 3 ಪಂದ್ಯಗಳಿಗೆ ಕೊನೆಗೂ ಶನಿವಾರ ತಂಡವನ್ನು ಪ್ರಕಟಿಸಿದ್ದಾರೆ. ನಿರೀಕ್ಷೆಯಂತೆಯೇ ಹಾಗೂ ಈಗಾಗಲೇ ವರದಿಯಾಗಿರುವಂತೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಗಾಯಾಳು ಶ್ರೇಯಸ್ ಅಯ್ಯರ್‌ರನ್ನು ತಂಡದಿಂದ ಕೈಬಿಡಲಾಗಿದೆ.

ವೈಯಕ್ತಿಕ ಕಾರಣಗಳಿಂದಾಗಿ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಿದ್ದ ಕೊಹ್ಲಿ ಇನ್ನುಳಿದಿರುವ ಪಂದ್ಯಗಳಲ್ಲೂ ಲಭ್ಯವಿರುವುದಿಲ್ಲ.

ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಕಾರಣಗಳಿಗಾಗಿ ಸರಣಿಯ ಉಳಿದಿರುವ ಪಂದ್ಯಗಳಿಗೆ ಆಯ್ಕೆಗೆ ಲಭ್ಯವಿಲ್ಲ. ಕ್ರಿಕೆಟ್ ಮಂಡಳಿಯು ಕೊಹ್ಲಿ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಹಾಗೂ ಬೆಂಬಲಿಸುತ್ತದೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಾಷ್ಟ್ರೀಯ ಆಯ್ಕೆ ಸಮಿತಿಯು ಸೀನಿಯರ್ ಆಟಗಾರರಾದ ರವೀಂದ್ರ ಜಡೇಜ ಹಾಗೂ ಕೆ.ಎಲ್.ರಾಹುಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಇಬ್ಬರು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮೂರನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಾಗಿದೆ.

ರವೀಂದ್ರ ಜಡೇಜ ಹಾಗೂ ಕೆ.ಎಲ್.ರಾಹುಲ್ ಅವರು ದೈಹಿಕವಾಗಿ ಕ್ಷಮತೆ ಹೊಂದಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಪ್ರಮಾಣಪತ್ರ ನೀಡಿದರೆ ಇನ್ನುಳಿದ ಪಂದ್ಯಗಳಲ್ಲಿ ಭಾಗವಹಿಸಬಹುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಬೆನ್ನುನೋವಿನಿಂದ ಬಳಲುತ್ತಿರುವ ಸೀನಿಯರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ದೈಹಿಕ ಕ್ಷಮತೆ ಕುರಿತು ಬಿಸಿಸಿಐ ಮೌನವಾಗಿದೆ. ಅಯ್ಯರ್ ಅವರು ಕೊಹ್ಲಿ ಹಾಗೂ ರಾಹುಲ್ ಅನುಪಸ್ಥಿತಿಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಅಯ್ಯರ್ ಗಾಯಗೊಳ್ಳದೇ ಇರುತ್ತಿದ್ದರೂ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿತ್ತು. ಇದು ಆಯ್ಕೆಗಾರರ ನಿರ್ಧಾರವನ್ನು ಸುಲಭ ಮಾಡಿದೆ ಎಂದು ಊಹಾಪೋಹ ಕೇಳಿಬಂದಿದೆ.

17 ಸದಸ್ಯರ ತಂಡದಲ್ಲಿ ಬಂಗಾಳದ ವೇಗದ ಬೌಲರ್ ಆಕಾಶ್ ದೀಪ್ ಹೊಸ ಮುಖವಾಗಿದ್ದು, ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಇತ್ತೀಚೆಗೆ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಿನ ಪಂದ್ಯದಲ್ಲಿನ ಸ್ಥಿರ ಪ್ರದರ್ಶನವನ್ನು ಪರಿಗಣಿಸಿ ಮಣೆ ಹಾಕಲಾಗಿದೆ.

ಜಡೇಜ ವಾಪಾಸಾಗಿರುವ ಕಾರಣ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್‌ರನ್ನು ತಂಡದಿಂದ ಕೈಬಿಡಲಾಗಿದೆ. ಅವೇಶ್ ಖಾನ್ ಬದಲಿಗೆ ವೇಗಿ ಮುಹಮ್ಮದ್ ಸಿರಾಜ್‌ರನ್ನು ಸೇರಿಸಿಕೊಳ್ಳಲಾಗಿದೆ. ಸಿರಾಜ್ ಸೇರ್ಪಡೆಯಿಂದ ವೇಗದ ಬೌಲಿಂಗ್ ವಿಭಾಗದಲ್ಲಿ ಶಕ್ತಿ ಬಂದಿದ್ದು, ಭಾರತದ ಬೌಲಿಂಗ್ ದಾಳಿಯನ್ನು ಮತ್ತಷ್ಟು ಬಲಿಷ್ಠವಾಗಿಸಿದೆ.

ಐದು ಪಂದ್ಯಗಳ ಸರಣಿಯು ಸದ್ಯ 1-1ರಿಂದ ಸಮಬಲಗೊಂಡಿದ್ದು, ಮೂರನೇ ಟೆಸ್ಟ್ ಪಂದ್ಯವು ರಾಜ್‌ಕೋಟ್‌ನಲ್ಲಿ ಫೆಬ್ರವರಿ 15ರಿಂದ ಆರಂಭವಾಗಲಿದೆ. ಆ ನಂತರ ಕೊನೆಯ ಎರಡು ಟೆಸ್ಟ್ ಪಂದ್ಯಗಳು ರಾಂಚಿ(ಫೆಬ್ರವರಿ 23) ಹಾಗೂ ಧರ್ಮಶಾಲಾ(ಮಾ.7)ದಲ್ಲಿ ನಡೆಯಲಿದೆ.

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಜಸ್‌ಪ್ರೀತ್ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆ.ಎಲ್.ರಾಹುಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್(ವಿಕೆಟ್‌ಕೀಪರ್), ಕೆ.ಎಸ್. ಭರತ್(ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News