ವಿರಾಟ್ ಕೊಹ್ಲಿ, ರೋಹಿತ್ 2027ರ ವಿಶ್ವಕಪ್ ನಲ್ಲೂ ಆಡಬಹುದು: ಗೌತಮ್ ಗಂಭೀರ್

Update: 2024-07-22 15:42 GMT

                                                                                            ಗೌತಮ್ ಗಂಭೀರ್ , ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 

ಹೊಸದಿಲ್ಲಿ: ಅನುಭವಿ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ದೈಹಿಕ ಕ್ಷಮತೆ ಹೊಂದಿದ್ದರೆ 2027ರ ಏಕದಿನ ವಿಶ್ವಕಪ್ ಟೂರ್ನಿಯ ತನಕ ಆಡುವುದನ್ನು ಮುಂದುವರಿಸಬಹುದು ಎಂದು ಭಾರತದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅಂತಿಮ ನಿರ್ಧಾರವು ಆಟಗಾರರನ್ನು ಅವಲಂಬಿಸಿದೆ ಎಂದು ಒತ್ತಿ ಹೇಳಿದರು.

ರೋಹಿತ್(37ವರ್ಷ) ಹಾಗೂ ಕೊಹ್ಲಿ(35 ವರ್ಷ)ಇತ್ತೀಚೆಗೆ ಟಿ20 ಅಂತರರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯಾಗಿದ್ದರು. ಆದರೆ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ರಾಹುಲ್ ದ್ರಾವಿಡ್ರಿಂದ ಕೋಚ್ ಹುದ್ದೆ ವಹಿಸಿಕೊಂಡ ನಂತರ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ ಗಂಭೀರ್, ತಂಡಕ್ಕೆ ವಿರಾಟ್ ಹಾಗೂ ಕೊಹ್ಲಿ ತಂದಿರುವ ಅನುಭವ ಹಾಗೂ ಕೌಶಲ್ಯವನ್ನು ಬೆಟ್ಟು ಮಾಡಿದರು. ಟಿ20 ವಿಶ್ವಕಪ್ ಹಾಗೂ 50 ಓವರ್ ವಿಶ್ವಕಪ್ನಂತಹ ಪ್ರಮುಖ ಟೂರ್ನಿಗಳಲ್ಲಿ ಅವರ ಶ್ರೇಷ್ಠ ಪ್ರದರ್ಶನದತ್ತ ಗಮನ ಸೆಳೆದರು.

ನಾನು ಸ್ಪಷ್ಟವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಈ ಇಬ್ಬರೂ ಆಟಗಾರರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಮುಖ್ಯವಾಗಿ ಚಾಂಪಿಯನ್ಸ್ ಟ್ರೋಫಿ (2025ರಲ್ಲಿ) ಹಾಗೂ ಆಸ್ಟ್ರೇಲಿಯದ ಪ್ರಮುಖ ಪ್ರವಾಸ (ನವೆಂಬರ್ 2024ರಿಂದ) ದಲ್ಲಿ ಈ ಇಬ್ಬರ ಉಪಸ್ಥಿತಿಯು ನಿಸ್ಸಂದೇಹವಾಗಿ ಉತ್ತೇಜನಕಾರಿ ಅಂಶವಾಗಿರುತ್ತದೆ. ವಿಶ್ವ ದರ್ಜೆಯ ಆಟಗಾರರಾದ ವಿರಾಟ್ ಹಾಗೂ ರೋಹಿತ್ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಶಕ್ತರಾದರೆ 2027ರ ವಿಶ್ವಕಪ್ಗೂ ಲಭ್ಯವಿರುವ ವಿಶ್ವಾಸ ನನಗಿದೆ. ಆದರೆ ಇದು ತೀರಾ ವೈಯಕ್ತಿಕ ನಿರ್ಧಾರ. ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ ತಂಡದ ಯಶಸ್ಸಿಗೆ ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ಆಟಗಾರರೇ ನಿರ್ಧರಿಸುತ್ತಾರೆ ಎಂದು ಗಂಭೀರ್ ಹೇಳಿದರು.

ಪಲ್ಲೆಕೆಲೆಯಲ್ಲಿ ಶನಿವಾರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಸರಣಿಯ ಮೂಲಕ ಗಂಭೀರ್ ಅವರ ಕೋಚಿಂಗ್ ಅವಧಿಯು ಅಧಿಕೃತವಾಗಿ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News