ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಾಪಸಾದ ಭಾರತದ ಪುರುಷರ ಹಾಕಿ ತಂಡಕ್ಕೆ ವೀರೋಚಿತ ಸ್ವಾಗತ

Update: 2024-08-10 16:15 GMT

PC ; PTI 

ಹೊಸದಿಲ್ಲಿ : ಸತತ ಎರಡನೇ ಕಂಚಿನ ಪದಕ ಜಯಿಸಿ, ಹೊಸ ದಾಖಲೆಯನ್ನು ನಿರ್ಮಿಸಿರುವ ಭಾರತೀಯ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಸ್ವದೇಶಕ್ಕೆ ವಾಪಸಾಗಿದ್ದು ವೀರೋಚಿತ ಸ್ವಾಗತ ನೀಡಲಾಗಿದೆ.

ಭಾರತದ ಹಾಕಿ ತಂಡವು ಐದು ದಶಕಗಳಿಗೂ ಅಧಿಕ ಸಮಯದ ನಂತರ ಒಲಿಂಪಿಕ್ಸ್‌ನಲ್ಲಿ ಸತತ ಪದಕಗಳನ್ನು ಬಾಚಿಕೊಂಡು ಚಾರಿತ್ರಿಕ ಮೈಲಿಗಲ್ಲು ಸ್ಥಾಪಿಸಿತ್ತು. 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿ ಈ ಸಾಧನೆ ಮಾಡಿತ್ತು.

ಕಂಚಿನ ಪದಕ ಗೆದ್ದಿರುವ ನಮಗೆ ಭಾರತೀಯ ಅಭಿಮಾನಿಗಳು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿರುವುದನ್ನು ನೋಡಿ ಹೃದಯ ತುಂಬಿ ಬಂದಿದೆ. ಒಲಿಂಪಿಕ್ಸ್ ತಯಾರಿಗೆ ತಂಡವು ಎಲ್ಲ ರೀತಿಯಲ್ಲೂ ತಯಾರಿ ನಡೆಸಿತ್ತು. ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಿದೆ. ಇಡೀ ದೇಶವು ನಮ್ಮ ಗೆಲುವನ್ನು ಆನಂದಿಸುವುದನ್ನು ನೋಡಿ ಖುಷಿಯಾಗುತ್ತಿದೆ ಎಂದು ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಭಾರತೀಯ ಪುರುಷರ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ 52 ವರ್ಷಗಳ ನಂತರ ಮೊದಲ ಬಾರಿ ಆಸ್ಟ್ರೇಲಿಯವನ್ನು 3-2 ಅಂತರದಿಂದ ಮಣಿಸಿತ್ತು. ಬ್ರಿಟನ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲೂ ತನ್ನ ಪ್ರತಿರೋಧ ಮುಂದುವರಿಸಿದ್ದ ಭಾರತವು 40 ನಿಮಿಷಗಳ ಕಾಲ 10 ಆಟಗಾರರೊಂದಿಗೆ ಆಡಿ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ಗೆ ವಿಸ್ತರಿಸಿತ್ತು. ಶೂಟೌಟ್‌ನಲ್ಲಿ 4-2 ಅಂತರದಿಂದ ಭಾರತವು ಜಯ ಸಾಧಿಸಿದ್ದು ಗೋಲ್‌ಕೀಪರ್ ಪಿ.ಆರ್.ಶ್ರಿಜೇಶ್ ಹೀರೊವಾಗಿ ಹೊರಹೊಮ್ಮಿದ್ದರು.

ಪ್ಯಾರಿಸ್‌ಗೆ ತೆರಳುವ ಮೊದಲೇ ಲೆಜೆಂಡರಿ ಗೋಲ್‌ಕೀಪರ್ ಪಿ.ಆರ್.ಶ್ರಿಜೇಶ್ ತನ್ನ ನಿವೃತ್ತಿಯ ಯೋಜನೆಯನ್ನು ಪ್ರಕಟಿಸಿದ್ದರು. ಶ್ರಿಜೇಶ್‌ಗಾಗಿ ಪದಕ ಗೆಲ್ಲಬೇಕೆಂದು ಆಟಗಾರರು ನಿರ್ಧರಿಸಿದ್ದರು. ಆ ನಿಟ್ಟಿನಲ್ಲಿ ಯಶಸ್ವಿಯಾದ ಭಾರತದ ಹಾಕಿ ತಂಡವು ಸ್ಪೇನ್ ತಂಡದ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯವನ್ನು ಜಯಿಸಿತ್ತು.

ನಾಯಕ ಹರ್ಮನ್‌ಪ್ರೀತ್ ಸಿಂಗ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 10 ಗೋಲುಗಳನ್ನು ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಕಂಚಿಗಾಗಿ ನಡೆದ ಪಂದ್ಯದಲ್ಲಿ ಸಿಂಗ್ ಎರಡು ಗೋಲುಗಳನ್ನು ಗಳಿಸಿ ಗೆಲುವಿಗೆ ನೆರವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News