ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ದಾರಿ ಯಾವುದು?
ಮುಂಬೈ: ಶ್ರೀಲಂಕಾ ತಂಡದೆದುರು ನ್ಯೂಝಿಲ್ಯಾಂಡ್ ತಂಡವು ಐದು ವಿಕೆಟ್‌ಗಳ ಗೆಲುವು ಸಾಧಿಸಿದ ನಂತರ, ಸೆಮಿಫೈನಲ್ ತಲುಪುವ ಪಾಕಿಸ್ತಾನದ ಗುರಿಯು ಕೊಂಚ ಸಂಕೀರ್ಣವಾಗಿದೆ ಎಂದು sportstar ವರದಿ ಮಾಡಿದೆ.
ಈ ಗೆಲುವಿನಿಂದ ನ್ಯೂಝಿಲ್ಯಾಂಡ್ ತಂಡವು ಅಂಕಪಟ್ಟಿಯಲ್ಲಿ ಕೊಂಚ ಮೇಲುಗೈ ಪಡೆದಂತಾಗಿದೆ. ಪಾಕಿಸ್ತಾನ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಗಳಿಸಿ ಕಿವೀಸ್‌ಗೆ ಸಮವಾಗಬಹುದಾದರೂ, ಅದು ತನ್ನ ನೆಟ್ ರನ್ ರೇಟ್ ಸುಧಾರಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡಬೇಕಿದೆ.
ನವೆಂಬರ್ 11ರಂದು ಪಾಕಿಸ್ತಾನ ತಂಡವು ತನ್ನ ಕೊನೆಯ ರೌಂಡ್ ರಾಬಿನ್ ಲೀಗ್ ಪಂದ್ಯವನ್ನು ಇಂಗ್ಲೆಂಡ್ ತಂಡದೆದುರು ಕೋಲ್ಕತಾದಲ್ಲಿ ಆಡಲಿದೆ. ತಾನು ಆಡಿರುವ ಎಲ್ಲ ಪಂದ್ಯಗಳಿಂದ ನ್ಯೂಝಿಲ್ಯಾಂಡ್ ತಂಡದ ನೆಟ್ ರನ್ ರೇಟ್ 0.74 ಆಗಿದೆ. ಪಾಕಿಸ್ತಾನ ತಂಡದ ನೆಟ್ ರನ್ ರೇಟ್ 0.75ಕ್ಕೆ ತಲುಪಬೇಕಿದ್ದರೆ, ಒಂದು ವೇಳೆ ಮೊದಲಿಗೆ ಬ್ಯಾಟಿಂಗ್ ಮಾಡಿದರೆ 287 ಅಥವಾ 288 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಬೇಕಿದೆ. ಒಂದು ವೇಳೆ ಮೊದಲು ಬೌಲಿಂಗ್ ಮಾಡಿದರೆ, ಇಂಗ್ಲೆಂಡ್ ತಂಡವು ನೀಡಲಿರುವ ಗುರಿಯನ್ನು ಇನ್ನೂ 284 ಬಾಲ್‌ಗಳು ಬಾಕಿ ಇರುವಾಗಲೇ ದಾಟಬೇಕಿದೆ.
ಆದರೆ, ಪಾಕಿಸ್ತಾನವೇನಾದರೂ ಎರಡನೆ ಸರದಿಯಲ್ಲಿ ಬ್ಯಾಟಿಂಗ್ ಮಾಡಿದರೆ ಮೇಲೆ ಹೇಳಲಾಗಿರುವ ಸನ್ನಿವೇಶವು ಕೇವಲ ಅಂದಾಜಿನದ್ದಾಗಿದೆ. ಹೀಗಾಗಿ, ಪಾಕಿಸ್ತಾನ ತಂಡವು ಎಷ್ಟು ರನ್ ನೀಡುತ್ತದೆ ಎಂಬುದರ ಮೇಲೆ, ಅದು ಎಷ್ಟು ಬಾಲ್‌ಗಳು ಉಳಿದಿರುವಾಗ ಗುರಿಯನ್ನು ದಾಟಬೇಕು ಎಂಬುದು ನಿರ್ಧಾರವಾಗಲಿದೆ.
ಪಾಕಿಸ್ತಾನಕ್ಕಿರುವ ಒಂದೇ ಅವಕಾಶವೆಂದರೆ, ಮೊದಲು ಬ್ಯಾಟಿಂಗ್ ಮಾಡಿ 400 ರನ್‌ಗಳನ್ನು ಕಲೆ ಹಾಕುವುದು ಹಾಗೂ ನಂತರ ಇಂಗ್ಲೆಂಡ್ ತಂಡವನ್ನು 112 ರನ್‌ಗೆ ಕಟ್ಟಿ ಹಾಕುವುದು. ಆಗ ಅದರ ನೆಟ್ ರನ್ ರೇಟ್ ನ್ಯೂಝಿಲೆಂಡ್ ತಂಡಕ್ಕಿಂತ ಮೇಲಿರಲಿದೆ.
ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯಲಿರುವ ತಂಡವು ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡವನ್ನು ಎದುರಿಸಲಿದೆ.