ಭಾರತ- ಇಂಗ್ಲೆಂಡ್ ಸೆಮಿಫೈನಲ್ ಗೆ ಮಳೆ ಅಡ್ಡಿಯಾದರೆ ಏನಾಗುತ್ತದೆ? ಮಾಹಿತಿ ಇಲ್ಲಿದೆ

Update: 2024-06-26 05:09 GMT

ಭಾರತ ತಂಡದ ಆಟಗಾರರು PC: X/crickbuzz

ಹೊಸದಿಲ್ಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಗುರುವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ನ ಸವಾಲು ಎದುರಿಸಲಿದೆ. ಈ ಮಧ್ಯೆ ಪಂದ್ಯಕ್ಕೆ ಮಳೆಯ ಭೀತಿ ತೀವ್ರವಾಗಿ ಕಾಡುತ್ತಿದೆ.

ಆಕ್ಯೂವೆದರ್.ಕಾಮ್ ನ ಮುನ್ಸೂಚನೆಯಂತೆ ಗುರುವಾರ ಮುಂಜಾನೆ ಗಯಾನಾದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡ 88ರಷ್ಟಿದೆ ಮತ್ತು ಗಾಳಿಮಳೆಯ ಸಾಧ್ಯತೆ ಶೇಕಡ 18ರಷ್ಟಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10.30ಕ್ಕೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಟ್ರಿನಿಡಾಡ್ ನಲ್ಲಿ ಬುಧವಾರ ನಡೆಯುವ ಪಂದ್ಯಕ್ಕೆ ಇರುವಂತ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಆದರೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದಲ್ಲಿ ಫಲಿತಾಂಶ ಸಾಧಿಸಲು 250 ನಿಮಿಷಗಳ ಹೆಚ್ಚುವರಿ ಸಮಯಾವಕಾಶವನ್ನು ಹಂಚಿಕೆ ಮಾಡಲಾಗಿದೆ. ಹೆಚ್ಚುವರಿ ಸಮಯದಲ್ಲಿ ಕೂಡಾ ಮಳೆಯಿಂದ ಒಂದು ಎಸೆತದ ಆಟವೂ ಸಾಧ್ಯವಾಗದಿದ್ದರೆ, ಸೂಪರ್ 8 ಹಂತದಲ್ಲಿ ಇಂಗ್ಲೆಂಡಿನಿಂದ ಉತ್ತಮ ಸಾಧನೆ ಮಾಡಿರುವ ಆಧಾರದಲ್ಲಿ ಭಾರತ ತಂಡ ಫೈನಲ್ ಗೆ ಮುನ್ನಡೆಯಲಿದೆ. ಒಂದನೇ ಗುಂಪಿನಲ್ಲಿ ಭಾರತ ತಂಡ ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಹೀಗೆ ಎಲ್ಲ ಮೂರೂ ಪಂದ್ಯಗಳನ್ನು ಗೆದ್ದಿದೆ.

ಎರಡನೇ ಗುಂಪಿನಲ್ಲಿ ಇಂಗ್ಲೆಂಡ್ ಎರಡನೇ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನಿ. ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಟೂರ್ನಿಯಿಂದ ಹೊರಗಟ್ಟಿದ ಸಾಧನೆ ಮಾಡಿದ ಅಫ್ಘಾನಿಸ್ತಾನ ತಂಡ ಮೊದಲ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News