ಹೊಸ ಜಾವೆಲಿನ್ ಪಡೆಯಲು ಕಷ್ಟಪಡುತ್ತಿದ್ದ ಅರ್ಷದ್ ನದೀಮ್‌ಗೆ ಬೆಂಬಲವಾಗಿ ನಿಂತಿದ್ದ ನೀರಜ್ ಚೋಪ್ರಾ!
ಪ್ಯಾರಿಸ್: ಒಲಿಂಪಿಕ್ಸ್ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಬಾಚಿಕೊಂಡ ಪಾಕಿಸ್ತಾನದ ಅರ್ಷದ್ ನದೀಮ್ ಜಗತ್ತಿನ ಗಮನ ಸೆಳೆದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಗುರುವಾರ ಅರ್ಷದ್ ನದೀಮ್ ಅವರ ದಿನವಾಗಿದೆ ಎಂದು ಚಿನ್ನದ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಅರ್ಷದ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಐದು ತಿಂಗಳ ಹಿಂದೆ ಅರ್ಷದ್ ಅವರು ಹೊಸ ಜಾವೆಲಿನ್ ಪಡೆಯಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ನೀರಜ್ ಛೋಪ್ರಾ ತನ್ನ ಗೆಳೆಯನ ಬೆಂಬಲಕ್ಕೆ ನಿಂತಿದ್ದ ಘಟನೆಯನ್ನು ಈಗ ಹಲವರು ನೆನಪಿಸಿಕೊಳ್ಳುತ್ತಿದ್ದಾರೆ.
ಮಾರ್ಚ್ 2024ರಲ್ಲಿ ಅರ್ಷದ್ ಹೊಸ ಅಂತರರಾಷ್ಟ್ರೀಯ ಮಟ್ಟದ ಜಾವೆಲಿನ್ ಪಡೆಯಲು ಕಷ್ಟಪಡುತ್ತಿದ್ದ ಸಂದರ್ಭ ಅವರಿಗೆ ನೀರಜ್ ಬೆಂಬಲಿಸಿದ್ದರು. ಆಗ ಮಾದ್ಯಮಗಳ ಜೊತೆ ಮಾತನಾಡಿದ್ದ ಅರ್ಷದ್ “ನನ್ನ ಜಾವೆಲಿನ್ ಹಾನಿಗೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುನ್ನ ಏನಾದರೂ ಮಾಡುವಂತೆ ನಮ್ಮ ಫೆಡರೇಷನ್ ಮತ್ತು ಕೋಚ್‌ಗೆ ಮನವಿ ಮಾಡಿದ್ದೇನೆ,” ಎಂದು ಅವರು ಹೇಳಿದ್ದರು.
ಕಳೆದ ಏಳೆಂಟು ವರ್ಷಗಳಿಂದ ಅದೇ ಜಾವೆಲಿನ್ ಬಳಸುತ್ತಿದ್ದ ಅರ್ಷದ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಉಪಯೋಗಿಸುವುದು ಅಸಾಧ್ಯವಾಗಿತ್ತು.
ಆಗ ಪ್ರತಿಕ್ರಿಯಿಸಿದ್ದ ನೀರಜ್ “ಅರ್ಷದ್ ಹೊಸ ಜಾವೆಲಿನ್ ಪಡೆಯಲು ಕಷ್ಟಪಡುತ್ತಿದ್ದಾರೆಂದು ತಿಳಿದು ಬೇಸರವಾಗುತ್ತಿದೆ. ಅವರ ಪ್ರತಿಭೆ ಗಮನಿಸಿದಾಗ ಇದು ದೊಡ್ಡ ವಿಷಯವಲ್ಲ, ಅವರಂತಹ ಅಥ್ಲೀಟ್‌ಗೆ ಸೂಕ್ತ ಪರಿಕರಗಳು ಮತ್ತು ಬೆಂಬಲ ದೊರೆಯಬೇಕು,” ಎಂದಿದ್ದರು.
“ಅರ್ಷದ್ ಒಬ್ಬ ಅಗ್ರ ಆಟಗಾರ ಅವರಿಗೆ ಜಾವೆಲಿನ್ ಒದಗಿಸಲು ಜಾವೆಲಿನ್ ತಯಾರಕರು ಖುಷಿ ಪಡುತ್ತಾರೆಂದು ನಂಬಿದ್ದೇನೆ,” ಎಂದು ನೀರಜ್ ಹೇಳಿದ್ದರು.