ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಿಂದ ಶಮಿ ಹೊರಗುಳಿಯಲು ಕಾರಣವೇನು?
ಹೊಸದಿಲ್ಲಿ: ನವೆಂಬರ್ 22ರಿಂದ ಪರ್ತ್ ನಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗಾವಸ್ಕರ್ ಟ್ರೋಫಿ ದ್ವಿಪಕ್ಷೀಯ ಟೆಸ್ಟ್ ತಂಡದಿಂದ ವೇಗದ ಬೌಲರ್ ಮೊಹಮದ್ ಶಮಿ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. 18 ಮಂದಿಯ ಭಾರತೀಯ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದ್ದು, ಅಭಿಮನ್ಯು ಈಶ್ವರನ್, ಹರ್ಷಿತ್ ರಾಣಾ ಹಾಗೂ ನಿತೀಶ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಜಸ್ಪ್ರೀತ್ ಬುಮ್ರಾ ಮತ್ತು ಮೊಹ್ಮದ್ ಸಿರಾಜ್ ಅವರು ಭಾರತೀಯ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿರುತ್ತಾರೆ. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಉತ್ತಮ ಸಾಧನೆ ಮಾಡಿರುವ ಆಕಾಶ್ ದೀಪ್ ಸ್ಥಾನ ಉಳಿಸಿಕೊಂಡಿದ್ದರೆ, ಗಾಯದಿಂದ ಚೇತರಿಸಿಕೊಂಡಿರುವ ಪ್ರಸಿದ್ಧ್ ಕೃಷ್ಣ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಎ ತಂಡ ದುಲೀಪ್ ಟ್ರೋಫಿಯಲ್ಲಿ ಜಯ ಸಾಧಿಸುವಲ್ಲಿ ಕರ್ನಾಟಕದ ಪ್ರತಿಭಾವಂತ ಬೌಲರ್ ಪ್ರಮುಖ ಪಾತ್ರ ವಹಿಸಿದ್ದರು.
ಹರ್ಷಿತ್ ಹಾಗೂ ನಿತೀಶ್ ರಾಣಾ ಇಬ್ಬರೂ ಮಧ್ಯಮ ವೇಗಿಗಳು ಹಾಗೂ ಆಲ್ ರೌಂಡರ್ಗಳಾಗಿದ್ದು, ಐಪಿಎಲ್ ಮತ್ತು ದೇಶಿ ಕ್ರಿಕೆಟ್ ನಲ್ಲಿನ ಉತ್ತಮ ಸಾಧನೆ ಹಿನ್ನೆಲೆಯಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪುಣೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಏಳು ವಿಕೆಟ್ ಕಬಳಿಸಿರುವ ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗದಲ್ಲಿ ಸೇರ್ಪಡೆಯಾಗಿದ್ದಾರೆ. ಅಕ್ಷರ್ ಪಟೇಲ್ ಸ್ಥಾನ ತೆರವುಗೊಳಿಸಿದ್ದಾರೆ.
ಪಾದದ ಗಾಯದಿಂದ ಚೇತರಿಸಿಕೊಂಡಿರುವ ಮೊಹ್ಮದ್ ಶಮಿ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಅವರು ಚೇತರಿಸಿಕೊಂಡಿದ್ದರೂ, ಮೊಣಕಾಲಿನಲ್ಲಿ ಬಾವು ಕಾಣಿಸಿಕೊಂಡಿರುವುದು ಅವರ ಲಭ್ಯತೆಯ ಬಗ್ಗೆ ಸಂಶಯಕ್ಕೆ ಕಾರಣವಾಗಿತ್ತು. ಆದರೂ ನೆಟ್ ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಶಮಿ ಭಾನುವಾರ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡಾ ಸರಣಿಗೆ ಆಯ್ಕೆಯಾಗಿಲ್ಲ. ಮುಕೇಶ್ ಕುಮಾರ್, ನವದೀಪ್ ಸೈನಿ ಮತ್ತು ಖಲೀಲ್ ಅಹ್ಮದ್ ಅವರನ್ನು ಮೀಸಲು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಪ್ರದರ್ಶಿಸುತ್ತಾ ಬಂದಿರುವ ಬಂಗಾಳದ ಅಭಿಮನ್ಯು ಈಶ್ವರನ್ ಅವರು ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಜತೆಗೆ ಮೂರನೇ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.