ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚೋಪ್ರಾ ಅವರ ಕೊನೆಯ ನಾಲ್ಕು ಥ್ರೋ ಫೌಲ್ ಆಗಿದ್ದೇಕೆ?
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ಸ್ಪರ್ಧೆ ಫೈನಲ್ ನಲ್ಲಿ ಮೊದಲ ಎಸೆತದಲ್ಲೇ ಚೋಪ್ರಾ ಮುಖದಲ್ಲಿ ಅತೀವ ಒತ್ತಡ ಕಂಡುಬರುತ್ತಿತ್ತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಪೋಡಿಯಂನಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವ ಗುರಿ ಹೊಂದಿದ್ದರು. ಆದರೆ ಕೊನೆಗೆ ಪಾಕಿಸ್ತಾನದ ಅರ್ಷದ್ ನದೀಮ್ ಅವರಿಗೆ ಚಿನ್ನ ಬಿಟ್ಟುಕೊಟ್ಟು ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಇಬ್ಬರು ಅಥ್ಲೀಟ್ ಗಳು ಕೂಡಾ ಮೊದಲ ಪ್ರಯತ್ನದಲ್ಲಿ ಫೌಲ್ ಎಸಗಿದರು. ಆದರೆ ಎರಡನೇ ಎಸೆತದಲ್ಲಿ ನದೀಮ್ ಒಲಿಂಪಿಕ್ ದಾಖಲೆಯ 92.97 ಮೀಟರ್ ದೂರಕ್ಕೆ ಎಸೆದದ್ದು, ಛೋಪ್ರಾ ಅವರಲ್ಲಿ ಅಚ್ಚರಿ ಮೂಡಿಸಿತ್ತು. ಒತ್ತಡದಲ್ಲಿ ಎರಡನೇ ಎಸೆತಕ್ಕೆ ಬಂದ ಚೋಪ್ರಾ ವಿಶ್ವಾಸದಿಂದ 89.45 ಮೀಟರ್ ಎಸೆದರು. ಆದರೆ ಇದು ನದೀಮ್ ಅವರನ್ನು ಹೊರತುಪಡಿಸಿದರೆ ಅತ್ಯುತ್ತಮ ಥ್ರೋ ಆಗಿತ್ತು. ಬಳಿಕ ನೀರಜ್ ಅವರ ನಾಲ್ಕು ಥ್ರೋ ಕೂಡಾ ಫೌಲ್ ಆಯಿತು.
ಮೂರು ಬಾರಿಯ ಪ್ಯಾರಾಒಲಿಂಪಿಕ್ ಪದಕ ವಿಜೇತ ಮತ್ತು ಭಾರತದ ಪ್ಯಾರಾ ಒಲಿಂಪಿಕ್ ಸಮಿತಿಯ ಅಧ್ಯಕ್ಷ ದೇವೇಂದ್ರ ಜಝಾರಿಯಾ ಹೇಳುವಂತೆ 93 ಮೀಟರ್ ಗಿಂತ ಆಚೆಗೆ ಎಸೆಯುವ ಪ್ರಯತ್ನದಲ್ಲಿ ನೀರಜ್ ನಾಲ್ಕು ಫೌಲ್ ಗಳನ್ನು ಎಸಗಿದರು. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.