ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಯಾದವ್ ಮರಳುತ್ತಾರೆಯೇ?

Update: 2024-04-26 17:20 GMT

ಮಯಾಂಕ್ ಯಾದವ್ | PC : NDTV 

ಲಕ್ನೋ : ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಮ್‍ನಲ್ಲಿ ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಕ್ಕೆ ವೇಗಿ ಮಯಾಂಕ್ ಯಾದವ್ ಲಭ್ಯರಾಗುತ್ತಾರೆ ಎನ್ನುವ ವಿಶ್ವಾಸವನ್ನು ಲಕ್ನೋ ಸೂಪರ್ ಜಯಂಟ್ಸ್‍ನ ಸಹಾಯಕ ಕೋಚ್ ಶ್ರೀಧರನ್ ಶ್ರೀರಾಮ್ ಶುಕ್ರವಾರ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡುವಾಗ ಮಯಾಂಕ್ ಕಿಬ್ಬೊಟ್ಟೆ ನೋವಿಗೆ ಒಳಗಾಗಿದ್ದರು.

“ಇಂದು ಅವರು ಅಭ್ಯಾಸದ ವೇಳೆ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ದೈಹಿಕವಾಗಿ ಕ್ಷಮತೆ ಹೊಂದಿರುವಂತೆ ಕಾಣುತ್ತಿದ್ದಾರೆ. ಆದರೆ, ನಾಳೆ ನಡೆಯಲಿರುವ ಪಂದ್ಯಕ್ಕೆ ಮುನ್ನ ನಾವು ಅಂತಿಮ ಪರೀಕ್ಷೆಯೊಂದನ್ನು ನಡೆಸಲಿದ್ದೇವೆ. ಆ ಬಳಿಕವಷ್ಟೇ ಅವರು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’’ ಎಂದು ಪಂದ್ಯಪೂರ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರನ್ ಶ್ರೀರಾಮ್ ಹೇಳಿದರು.

“ಅವರು ಅಗಾಧ ಪ್ರತಿಭೆ ಹೊಂದಿದ ಆಟಗಾರನಾಗಿದ್ದಾರೆ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ವರ್ಷದ ಐಪಿಎಲ್‍ನಲ್ಲಿ, ಎಸೆತಗಳಲ್ಲಿ ಅವರು ಹೊಂದಿರುವ ಲೆಂತ್‍ನ ಗುಣಮಟ್ಟ ಇತರ ಬೌಲರ್‌ ಗಳಿಗಿಂತ ಕಳಪೆಯಲ್ಲ. ಅವರು ಹೊಂದಿರುವ ವೇಗದಲ್ಲಿ ಅವರ ಎಸೆತಗಳನ್ನು ಎದುರಿಸುವುದು ತುಂಬಾ ಕಷ್ಟ. ಹಾಗಾಗಿಯೇ ಅವರು ವಿಶಿಷ್ಟರಾಗಿದ್ದಾರೆ’’ ಎಂದು ಶ್ರೀರಾಮ್ ಹೇಳಿದರು.

ಮಯಾಂಕ್ ಯಾದವ್ ಈವರೆಗೆ ಮೂರು ಐಪಿಎಲ್ ಪಂದ್ಯಗಳನ್ನು ಆಡಿ ಆರು ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧ ತಲಾ ಮೂರು ವಿಕೆಟ್‍ಗಳನ್ನು ಗಳಿಸಿದ್ದಾರೆ.

ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಮ್‍ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ ಒಂದು ಓವರ್ ಎಸೆದ ಬಳಿಕ ಮೈದಾನದಿಂದ ಹೊರ ಹೋಗಿದ್ದರು. ಆ ಪಂದ್ಯದಲ್ಲಿ ಅವರ ವೇಗದಲ್ಲಿ ಕುಸಿತವಾಗಿತ್ತು ಮತ್ತು ಅವರು ಒಂದೇ ಓವರ್‍ನಲ್ಲಿ ಮೂರು ಬೌಂಡರಿಗಳನ್ನು ನೀಡಿದ್ದರು. ಆ ಓವರ್‍ನಲ್ಲಿ ಅವರು ಒಟ್ಟು 13 ರನ್‍ಗಳನ್ನು ಕೊಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News