ಅ.14ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತೀಯ ತಂಡ ಕೇಸರಿ ಸಮವಸ್ತ್ರಗಳನ್ನು ಧರಿಸಲಿದೆಯೇ?
ಹೊಸದಿಲ್ಲಿ: ಮುಂದಿನ ಶನಿವಾರ, ಅ.14ರಂದು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾರತೀಯ ತಂಡದ ಆಟಗಾರರು ಎಂದಿನ ನೀಲಿ ಸಮವಸ್ತ್ರದ ಬದಲಿಗೆ ಸಂಪೂರ್ಣ ಕೇಸರಿ ಅಥವಾ ಎದ್ದುಕಾಣುವ ಕೇಸರಿ ಬಣ್ಣದೊಂದಿಗಿನ ಸಮವಸ್ತ್ರಗಳನ್ನು ಧರಿಸಬೇಕೇ ಎಂಬ ಬಗ್ಗೆ ಹಾಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಹಿರಿಯ ಕ್ರೀಡಾ ಪತ್ರಕರ್ತೆ ಶಾರದಾ ಉಗ್ರ ಅವರು ವಿಶ್ವಕಪ್ ಕುರಿತು ಸುದ್ದಿ ಜಾಲತಾಣ ‘ದಿ ವೈರ್ ’ನ ಯೂ ಟ್ಯೂಬ್ ಕಾರ್ಯಕ್ರಮ ‘ಔಟ್ ಆಫ್ ದಿ ಪಾರ್ಕ್’ನ ಮುಂಬರುವ ಸಂಚಿಕೆಯಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಶಾರದಾ ಹೇಳಿರುವಂತೆ ಭಾರತೀಯ ಆಟಗಾರರು ನಿಜಕ್ಕೂ ಈ ಹೊಸ ಕೇಸರಿ ಜೆರ್ಸಿಗಳನ್ನು ಧರಿಸಿಕೊಂಡು ಆಡಿದರೆ ಪಂದ್ಯದ ಬಳಿಕ ಅವುಗಳನ್ನು ಹರಾಜು ಹಾಕಲಾಗುತ್ತದೆ ಮತ್ತು ದೊರೆಯುವ ಮೊತ್ತವನ್ನು ಯುನಿಸೆಫ್‌ಗೆ ದೇಣಿಗೆಯಾಗಿ ನೀಡಲಾಗುವುದು. ಇದೊಂದು ವ್ಯವಸ್ಥಿತ ಪ್ರಚಾರ ತಂತ್ರವಾಗಿರುವಂತಿದೆ.
ಕ್ರಿಕೆಟ್ ವಿಶ್ವಕಪ್‌ನ ಇತ್ತೀಚಿನ ಅಭ್ಯಾಸ ಪಂದ್ಯವೊಂದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕೇಸರಿ ಜೆರ್ಸಿಗಳನ್ನು ಧರಿಸಿದ್ದು ನೀಲಿ ಜೆರ್ಸಿಯನ್ನು ಕೈಬಿಡಲಾಗುತ್ತದೆಯೇ ಎಂಬ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಶಾರದಾ ಅವರ ಕಾರ್ಯಕ್ರಮದಲ್ಲಿ ‘ಇದು ರಾಜಕೀಯ ಎಂದು ಭಾವಿಸದಿರಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂಬ ಶೀರ್ಷಿಕೆಯ ಹೊಸ ಭಾಗವೊಂದಿದೆ.
ಇದಕ್ಕೂ ಮುನ್ನ ಕ್ರೀಡೆಗೆ ಸಂಬಂಧಿಸಿದ್ದಕ್ಕಿಂತ ಖಂಡಿತವಾಗಿಯೂ ಹೆಚ್ಚು ರಾಜಕೀಯವಾಗಿದ್ದ ಇನ್ನೊಂದು ಚರ್ಚೆ ನಡೆದಿತ್ತು; ದೇಶೀಯ ತಂಡವನ್ನು ‘ಟೀಮ್ ಇಂಡಿಯಾ’ ಎಂದು ಕರೆಯಬೇಕೇ ಅಥವಾ ‘ಟೀಮ್ ಭಾರತ’ ಎಂದೇ ಎಂಬ ಬಗ್ಗೆ. ಪ್ರತಿಪಕ್ಷಗಳ ಮೈತ್ರಿಕೂಟವು ತನ್ನನ್ನು ‘ಇಂಡಿಯಾ ’ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್‌ನ ಸಂಕ್ಷಿಪ್ತ ರೂಪ) ಎಂದು ಹೆಸರಿಸಿಕೊಂಡಾಗಿನಿಂದ ನರೇಂದ್ರ ಮೋದಿ ಸರಕಾರ ಮತ್ತು ಬಿಜೆಪಿ ನಾಯಕರು ದೇಶವನ್ನು ಇಂಡಿಯಾದ ಬದಲು ‘ಭಾರತ’ಎಂದೇ ಕರೆಯಬೇಕು ಎನ್ನುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ವೀರೇಂದ್ರ ಸೆಹ್ವಾಗ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಈಗಾಗಲೇ ‘ಟೀಮ್ ಭಾರತ’ ಎಂದೇ ಉಲ್ಲೇಖಿಸುತ್ತಿದ್ದಾರೆ. ಆದಾಗ್ಯೂ ಭಾರತೀಯ ತಂಡವು ಸದಾ ‘ಟೀಮ್ ಇಂಡಿಯಾ ’ ಎಂದೇ ಕರೆಯಲ್ಪಡುತ್ತಿರುವುದರಿಂದ ಈ ಹಂತದಲ್ಲಿ ಹೆಸರನ್ನು ಬದಲಿಸುವುದು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುತ್ತದೆ ಎಂಬ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದು ಶಾರದಾ ಹೇಳಿದ್ದಾರೆ.
ಇತರ ಸಂಭಾವ್ಯ ಬೆಳವಣಿಗೆಗಳಲ್ಲಿ, ವಿದೇಶಗಳ ಕ್ರಿಕೆಟಿಗರು ಭಾರತವನ್ನು ‘ವಿಶ್ವಗುರು’ ಎಂದು ಬಣ್ಣಿಸುವುದನ್ನು ಎತ್ತಿ ತೋರಿಸುವ ರೀತಿಗಳಲ್ಲಿ ಪಂದ್ಯಾವಳಿಯ ಬಗ್ಗೆ ಟ್ವೀಟ್‌ಗಳನ್ನು ಮಾಡಬಹುದು ಮತ್ತು ಭಾರತೀಯ ತಂಡವು ಪಂದ್ಯಾವಳಿಯಲ್ಲಿ ಪ್ರಗತಿ ಸಾಧಿಸಿದರೆ ಪಂದ್ಯಗಳನ್ನು ಖುದ್ದಾಗಿ ವೀಕ್ಷಿಸಲು ಇತರ ದೇಶಗಳ ಮುಖ್ಯಸ್ಥರನ್ನು ಅಹ್ವಾನಿಸಬಹುದು ಎಂದು ಶಾರದಾ ಹೇಳಿದ್ದಾರೆ.