ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ | 10ನೇ ಬಾರಿ ಜೊಕೊವಿಕ್ ಫೈನಲ್ ಗೆ, ಅಲ್ಕರಾಝ್ ಎದುರಾಳಿ

Update: 2024-07-13 15:33 GMT

ನೊವಾಕ್ ಜೊಕೊವಿಕ್ | Photo : PTI

ಲಂಡನ್: ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಟೆನಿಸ್ ಅಂಗಣದಲ್ಲಿ ತನ್ನ ಅಮೋಘ ಕೌಶಲ್ಯಗಳನ್ನು ಪ್ರದರ್ಶಿಸಿ ಇಟಲಿಯ ಲೊರೆಂರೊ ಮುಸೆಟ್ಟಿ ಅವರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ 10ನೇ ಬಾರಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಸರ್ಬಿಯದ ಟೆನಿಸ್ ಮಾಂತ್ರಿಕ ಜೊಕೊವಿಕ್ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ 22ರ ಹರೆಯದ ಮುಸೆಟ್ಟಿ ಅವರನ್ನು 6-4, 7-6(2), 6-4 ಸೆಟ್ಗಳ ಅಂತರದಿಂದ ಮಣಿಸಿದರು.

ರವಿವಾರ ನಡೆಯಲಿರುವ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರು ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ರನ್ನು ಎದುರಿಸಲಿದ್ದಾರೆ. 2023ರಲ್ಲೂ ಈ ಜೋಡಿ ವಿಂಬಲ್ಡನ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದು, ಮತ್ತೊಂದು ರೋಚಕ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ಜೊಕೊವಿಕ್ ಹಾಗೂ ಅವರ ದೀರ್ಘಕಾಲದ ಎದುರಾಳಿ ರೋಜರ್ ಫೆಡರರ್ ಸತತ ಫೈನಲ್ ನಲ್ಲಿ ಸ್ಪರ್ಧಿಸಿದ್ದರು. ಇದೀಗ 2ನೇ ಶ್ರೇಯಾಂಕದ ಜೊಕೊವಿಕ್ ಹಾಗೂ ಅಲ್ಕರಾಝ್ ಸತತ ಎರಡನೇ ವರ್ಷ ಪ್ರಶಸ್ತಿ ಪಂದ್ಯದಲ್ಲಿ ಹೋರಾಡಲಿದ್ದಾರೆ.

ವಿಂಬಲ್ಡನ್ ನಲ್ಲಿ ಆಡುವುದು ಹಾಗೂ ಗೆಲ್ಲುವುದು ನನ್ನ ಬಾಲ್ಯದ ಕನಸಾಗಿತ್ತು ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ನಾನು ಏಳು ವರ್ಷದ ಹುಡುಗನಾಗಿದ್ದಾಗ ನನ್ನ ತಲೆಯ ಮೇಲೆ ಬಾಂಬ್ ಗಳನ್ನು ಹಾರುವುದನ್ನು ನೋಡುತ್ತಿದ್ದೆ. ಜಗತ್ತಿನ ಅತ್ಯಂತ ಪ್ರಮುಖವಾದ ಟೆನಿಸ್ ಕೋರ್ಟ್ನಲ್ಲಿ ಇರಬೇಕೆಂದು ಕನಸು ಕಾಣುತ್ತಿದ್ದೆ ಎಂದು ಸೆಂಟರ್ಕೋರ್ಟ್ ಪ್ರೇಕ್ಷಕರನ್ನು ಉದ್ದೇಶಿಸಿ ಜೊಕೊವಿಕ್ ಹೇಳಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.

ಮತ್ತೊಂದು ಸೆಮಿ ಫೈನಲ್ ನಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ಅವರು ರಶ್ಯದ 5ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ರನ್ನು 6-7(1), 6-3, 6-4, 6-4 ಸೆಟ್ಗಳ ಅಂತರದಿಂದ ಮಣಿಸಿದರು.

ಸೋಮವಾರ ಹೋಲ್ಗರ್ ರೂನ್ ವಿರುದ್ಧದ 4ನೇ ಸುತ್ತಿನ ಪಂದ್ಯದ ಗೆಲುವಿನ ನಂತರ ಪ್ರೇಕ್ಷಕರೊಂದಿಗೆ ತನ್ನ ಹತಾಶೆಯನ್ನು ವ್ಯಕ್ತಪಡಿಸಿದ ಹೊರತಾಗಿಯೂ 37ರ ವಯಸ್ಸಿನ ಜೊಕೊವಿಕ್ ಪ್ರೇಕ್ಷಕರಿಂದ ಹೆಚ್ಚಿನ ಬೆಂಬಲವನ್ನು ಕೋರಿದರು. ಕೆಲವರು ಇದಕ್ಕೆ ಗೇಲಿ ಮಾಡಿದರು.

ಮೊದಲ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡು ಶುಭಾರಂಭ ಮಾಡಿದ್ದ ಜೊಕೊವಿಕ್ ಎರಡನೇ ಸೆಟ್ಟನ್ನು ಟೈಬ್ರೇಕರ್ ನಲ್ಲಿ 7-6(2) ಅಂತರದಿಂದ ಗೆದ್ದುಕೊಂಡರು. ಮೂರನೇ ಸೆಟ್ ನಲ್ಲೂ ಪ್ರಾಬಲ್ಯ ಮೆರೆದ ಜೊಕೊವಿಕ್ 6-4 ಅಂತರದಿಂದ ಜಯಶಾಲಿಯಾದರು.

ಗೆಲುವು ಸಾಧಿಸಿದ ನಂತರ ಜೊಕೊವಿಕ್ ತನ್ನ ರಾಕೆಟ್ನಿಂದ ಪಿಟೀಲು ನುಡಿಸುವಂತೆ ನಟಿಸುತ್ತಾ ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದರು. ಜೊಕೊವಿಕ್ ತನ್ನ ಮಗಳಿಗಾಗಿ ಈ ರೀತಿ ಸಂಭ್ರಮಿಸಿದರು. ಸ್ಟೇಡಿಯಮ್ನಲ್ಲಿ ಪಂದ್ಯ ವೀಕ್ಷಿಸಿದ್ದ ಜೊಕೊವಿಕ್ ಪುತ್ರಿ ಸದ್ಯ ಪೀಟಿಲು ನುಡಿಸುವುದನ್ನು ಕಲಿಯುತ್ತಿದ್ದಾಳೆೆ. ಆದರೆ ಜೊಕೊವಿಕ್ ಅವರ ವರ್ತನೆಯು ಪ್ರೇಕ್ಷಕರ ಗೇಲಿಗೆ ಒಳಗಾಯಿತು.

ಪ್ರೇಕ್ಷಕರ ಪ್ರತಿಕ್ರಿಯೆಯಿಂದ ವಿಚಲಿತರಾಗದ ಜೊಕೊವಿಕ್ 8ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸುವತ್ತ ಗಮನಹರಿಸಿದ್ದಾರೆ. ಕೇವಲ 5 ವಾರಗಳ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೊಕೊವಿಕ್ ಫೈನಲ್ಗೆ ತಲುಪಿ ಮಹತ್ವದ ಸಾಧನೆ ಮಾಡಿದ್ದಾರೆ.

ಪಂದ್ಯಾವಳಿ ಆರಂಭವಾಗಲು 8 ದಿನಗಳಿರುವಾಗ ಲಂಡನ್ಗೆ ಆಗಮಿಸಿದ್ದೆ. ನಾನು ಆಡುತ್ತೇನೆಂದು ನನಗೆ ಗೊತ್ತಿರಲಿಲ್ಲ. ಡ್ರಾ ಪ್ರಕ್ರಿಯೆಯ ದಿನದ ತನಕ ಎಲ್ಲವನ್ನೂ ಮುಕ್ತವಾಗಿರಿಸಿದ್ದೆ. ಅಗ್ರ ಆಟಗಾರರೊಂದಿಗೆ ಕೆಲವು ಪ್ರಾಕ್ಟೀಸ್ ಸೆಟ್ ಆಡಿದ್ದೆ. ವಿಂಬಲ್ಡನ್ ಆಡಲು ನನಗೆ ಸಾಧ್ಯವಿದೆ ಎಂದು ಇದರಿಂದ ಸಾಬೀತಾಯಿತು. ನಾನೀಗ ಫೈನಲ್ಗೆ ತಲುಪಿರುವೆ. ನನಗೆ ನೆರವಾದ ಟೀಮ್ ಸದಸ್ಯರಿಗೆ ಧನ್ಯವಾದಗಳು ಎಂದು ಜೊಕೊವಿಕ್ ಹೇಳಿದ್ದಾರೆ.

24 ಗ್ರ್ಯಾನ್ಸ್ಲಾಮ್ ಒಡೆಯನಾಗಿರುವ ಜೊಕೊವಿಕ್ ಸತತ ಆರನೇ ಬಾರಿ ವಿಂಬಲ್ಡನ್ ಫೈನಲ್ಗೆ ತಲುಪಿದ್ದು, ಪ್ರಸಕ್ತ ವರ್ಷ ಮೊದಲ ಬಾರಿ ಈ ಸಾಧನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News