ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಕಂಚಿಗೆ ತೃಪ್ತಿಪಟ್ಟ ಪ್ರಣಯ್
ಹೊಸದಿಲ್ಲಿ, ಆ.26: ಕೋಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್‌ನಲ್ಲಿ ಸೋಲುಂಡಿರುವ ಭಾರತದ ಎಚ್.ಎಸ್.ಪ್ರಣಯ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಶನಿವಾರ 1 ಗಂಟೆ, 15 ನಿಮಿಷಗಳ ಕಾಲ ತೀವ್ರ ಪೈಪೋಟಿಯಿಂದ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.9ನೇ ಆಟಗಾರ ಪ್ರಣಯ್ 3ನೇ ರ್ಯಾಂಕಿನ ಆಟಗಾರ ಕುನ್ಲವುಟ್ ವಿರುದ್ಧ 21-18, 13-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದ್ದಾರೆ.
ಪ್ರಣಯ್ ಮೊದಲ ಗೇಮ್‌ನ್ನು 21-18 ಅಂತರದ ಜಯಿಸಿ ಉತ್ತಮ ಆರಂಭ ಪಡೆದಿದ್ದರು. 2ನೇ ಗೇಮ್‌ನಲ್ಲಿ 11-7 ಮುನ್ನಡೆ ಸಾಧಿಸಿದ ಕುನ್ಲವುಟ್ ಗೇಮ್‌ನ್ನು ತನ್ನತ್ತ ಸೆಳೆದರು. 21-13ರಿಂದ 2ನೇ ಗೇಮ್ ಗೆದ್ದುಕೊಂಡರು. ನಿರ್ಣಾಯಕ 3ನೇ ಗೇಮ್‌ನಲ್ಲಿ 11-7 ಮುನ್ನಡೆ ಪಡೆದ ಕುನ್ಲವುಟ್ ಒತ್ತಡ ಹೇರಲು ಯಶಸ್ವಿಯಾದರು. ಥಾಯ್ ಆಟಗಾರ 3ನೇ ಗೇಮನ್ನು 21-14 ರಿಂದ ಗೆದ್ದುಕೊಂಡು ಫೈನಲ್ ತಲುಪಿದರು.
ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸನ್‌ರನ್ನು 13-21, 21-15, 21-16 ಗೇಮ್‌ಗಳ ಅಂತರದಿಂದ ಮಣಿಸಿದ್ದ ಕೇರಳದ ಪ್ರಣಯ್ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದರು.
ಪ್ರಣಯ್ ಕಂಚಿನ ಪದಕ ಜಯಿಸುವ ಮೂಲಕ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಉತ್ತಮ ದಾಖಲೆ ಮುಂದುವರಿದಿದೆ. ಭಾರತ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಈ ತನಕ 14 ಪದಕಗಳನ್ನು ಜಯಿಸಿದೆ. ಪಿ.ವಿ. ಸಿಂದು 2019ರಲ್ಲಿ ಚಿನ್ನ ಸಹಿತ ಒಟ್ಟು 5 ಪದಕಗಳನ್ನು ಜಯಿಸಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಕೆ.ಶ್ರೀಕಾಂತ್(ಬೆಳ್ಳಿ), ಲಕ್ಷ್ಯ ಸೇನ್(ಕಂಚು), ಸಾಯಿ ಪ್ರಣೀತ್(ಕಂಚು) ಹಾಗೂ ಲೆಜೆಂಡರಿ ಪ್ರಕಾಶ್ ಪಡುಕೋಣೆ(ಕಂಚು)ಪದಕ ಜಯಿಸಿದ್ದಾರೆ.