ಭಾರತಕ್ಕೆ 11,637 ಕೋಟಿ ರೂ. ಆದಾಯ ತಂದುಕೊಟ್ಟ 2023ರ ಏಕದಿನ ವಿಶ್ವಕಪ್!
ಹೊಸದಿಲ್ಲಿ: 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯು ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಅಂದರೆ 11,637ಕೋಟಿ ರೂ. ಆದಾಯವನ್ನುಂಟು ಮಾಡಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿಕೊಂಡಿದೆ.
2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಫೈನಲ್ ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡದ ಎದುರು ಸೋಲನ್ನು ಕಂಡಿತ್ತು. ಆದರೂ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ʼಭಾರತಕ್ಕೆ ಆರ್ಥಿಕ ಉತ್ತೇಜನವನ್ನು ನೀಡಿದ ಐಸಿಸಿ ಕ್ರಿಕೆಟ್ ವಿಶ್ವಕಪ್- 2023ʼ ಎಂಬ ಶೀರ್ಷಿಕೆಯ ವರದಿಯು, ಭಾರತದಲ್ಲಿ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯು ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಅಂದರೆ 1.39 ಬಿಲಿಯನ್ ಡಾಲರ್ ಆದಾಯವನ್ನು ಸೃಷ್ಟಿಸಿದೆ ಎಂದು ಐಸಿಸಿ ಹೇಳಿಕೊಂಡಿದೆ.
ಈ ಕುರಿತು ನೀಲ್ಸನ್ ನಡೆಸಿದ ಮೌಲ್ಯಮಾಪನವು, ಕಳೆದ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯು ಇದುವರೆಗಿನ ಅತಿದೊಡ್ಡ ಏಕದಿನ ವಿಶ್ವಕಪ್ ಪಂದ್ಯ ಎಂದು ಹೇಳಿಕೊಂಡಿದೆ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕ್ರಿಕೆಟ್ ಮೂಲಕ ಗಮನಾರ್ಹವಾಗಿ ಆದಾಯ ಗಳಿಸಬಹುದು ಎಂಬುವುದನ್ನು ತೋರಿಸುತ್ತದೆ. ಭಾರತಕ್ಕೆ 1.39 ಬಿಲಿಯನ್ ಎಂದರೆ 11,637 ಕೋಟಿ ಆರ್ಥಿಕ ಲಾಭವನ್ನುಂಟುಮಾಡಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾವು ಗೆಲುವನ್ನು ಸಾಧಿಸಿತ್ತು. ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿಯು ನಡೆದಿತ್ತು. ಈ ವೇಳೆ ನಗರದಲ್ಲಿ ವಸತಿ, ಪ್ರಯಾಣ, ಸಾರಿಗೆ, ಆಹಾರ ಮತ್ತು ಪಾನೀಯಗಳ ಮೂಲಕ ಬರೊಬ್ಬರಿ 861.4 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ.
ಪಂದ್ಯಾವಳಿಯ ವೀಕ್ಷಣೆಗೆ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ದಾಖಲೆ ಮಟ್ಟದಲ್ಲಿ 1.25 ಮಿಲಿಯನ್ ಪ್ರೇಕ್ಷಕರು ಪಂದ್ಯಾವಳಿಯ ವೀಕ್ಷಣೆಗೆ ಹಾಜರಾಗಿದ್ದರು. ಅದರಲ್ಲಿ ಸುಮಾರು 75 ಪ್ರತಿಶತದಷ್ಟು ಜನರು ಮೊದಲ ಬಾರಿಗೆ ಪಂದ್ಯದ ವೀಕ್ಷಣೆಗೆ ಹಾಜರಾಗಿದ್ದರು ಎಂದು ವರದಿ ಹೇಳಿದೆ.
ಪಂದ್ಯ ವೀಕ್ಷಣೆಗೆ ಭಾರತಕ್ಕೆ ವಿದೇಶದಿಂದ ಬಂದಿದ್ದ ಕ್ರಿಕೆಟ್ ಅಭಿಮಾನಿಗಳು ಭಾರತದಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಇದು 281.2 ಮಿಲಿಯನ್ ಡಾಲರ್ ಆದಾಯವನ್ನು ನೀಡಿದೆ. ವಿದೇಶಿ ಪ್ರವಾಸಿಗರಲ್ಲಿ 68% ಜನರು ಭಾರತವನ್ನು ಪ್ರವಾಸಿ ತಾಣವಾಗಿ ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.
ಇದಲ್ಲದೆ 48,000ಕ್ಕೂ ಹೆಚ್ಚು ಪೂರ್ಣ ಮತ್ತು ಅರೆಕಾಲಿಕ ಉದ್ಯೋಗಗಳು ಪಂದ್ಯಾವಳಿಯ ವೇಳೆ ಸೃಷ್ಟಿಯಾಗಿದ್ದವು.
ಪಂದ್ಯಾವಳಿಯು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಭಾರತವನ್ನು ಪ್ರಮುಖ ಪ್ರವಾಸಿ ತಾಣವಾಗಿ ವಿಶ್ವಕ್ಕೆ ಸೆಳೆಯುವಂತೆ ಮಾಡಿದೆ.