ಝದ್ರಾನ್ ಶತಕ : ಆಸೀಸ್ ಗೆ 292 ರನ್ ಗುರಿ ನೀಡಿದ ಅಫ್ಘಾನಿಸ್ತಾನ
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಲ್ಲಿ ಝದ್ರಾನ್ ಅವರ ಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯ ಗೆಲುವಿಗೆ 292 ರನ್ ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಅಸೀಸ್ ವಿರುದ್ದ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ವಾಂಖೆಡೆ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಸೀಸ್ ಗೆ ಕಠಿಣ ಗುರಿ ನೀಡಬೇಕೆಂಬ ಉದ್ದೇಶ ದಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ ಪೆಡೆ ನಿಧಾನಗತಿಯಲ್ಲಿ ಇನ್ನಿಂಗ್ಸ್ ಕಟ್ಟಿತು. ಓಪನರ್ ರಹ್ಮತುಲ್ಲಾ ಗುರ್ಬಾಝ್ 21 ರನ್ ಗೆ ತಂಡದ 8 ನೇ ಓವರ್ ನಲ್ಲಿ ಹೇಝಲ್‌ವುಡ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ ಮೂರನೇ ಕ್ರಮಾಂಕದಲ್ಲಿ ಬಂದ ರಹ್ಮತ್ ಶಾ 30 ರನ್ ಗೆ ಮಾಕ್ಸ್‌ವೆಲ್ ಆಫ್ ಸ್ಪಿನ್ ಗೆ ಔಟ್ ಆದರು. ಅಫ್ಘಾನಿಸ್ತಾನ ಪರ ಮೊದಲಿನಿಂದ ಕಡೇ ವರೆಗೂ ಏಕಾಂಗಿ ಹೋರಾಟ ಪ್ರದರ್ಶಿಸಿದ್ದ ಇಬ್ರಾಹೀಂ ಝದ್ರಾನ್ ಆಸ್ಟ್ರೇಲಿಯ ವಿರುದ್ಧ ಆಕರ್ಷಕ ಶತಕ ಬಾರಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು. ಅಸೀಸ್ ವಿರುದ್ಧ ನಿಧಾನಗತಿ ರಕ್ಷಣಾತ್ಮಕ ಆಟವಾಡಿದ ಝದ್ರಾನ್ 142 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತ 129 ರನ್ ಬಾರಿಸಿದರು.
ಅಫ್ಘಾನ್ ಪರ ನಾಯಕ ಹಶ್ಮತುಲ್ಲಾ ಶಾಹಿದಿ 26 , ಅಝ್ಮತುಲ್ಲಾ 22 , ಮುಹಮ್ಮದ್ ನಬಿ 12 ಗಳಿಸಿದರೆ ಕಡೇ ಗಳಿಗೆಯಲ್ಲಿ ಸ್ಟೋಟಕ ಬ್ಯಾಟಿಂಗ್ ಮಾಡಿದ ರಶೀದ್ ಖಾನ್ 35 ರನ್ ಬಾರಿಸಿದರು.
ಆಸ್ಟ್ರೇಲಿಯ ಪರ ಜೋಸ್ ಹೇಝಲ್‌ವುಡ್ 2 ವಿಕೆಟ್ ಪಡೆದರೆ ಮಿಷೆಲ್ ಸ್ಟಾರ್ಕ್, ಮ್ಯಾಕ್ಸ್‌ವೆಲ್ ಹಾಗೂ ಆಡಂ ಝಾಂಪ ತಲಾ ಒಂದು ವಿಕೆಟ್ ಕಬಳಿಸಿದರು.