ಬಂಡೀಪುರಕ್ಕೆ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೆ 1 ಕೋಟಿ ರೂ. ವಿಮೆ ಜಾರಿ

Update: 2023-10-07 17:21 GMT

ಚಾಮರಾಜನಗರ : ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಅರಣ್ಯ ಇಲಾಖೆಯು ನೂತನ ವಿಮಾ ಯೋಜನೆಯನ್ನು ಆರಂಭಿಸಿದೆ. ಸಫಾರಿ ವೇಳೆ ಪ್ರವಾಸಿಗರು ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟರೆ ಈ ಯೋಜನೆ ಅಡಿಯಲ್ಲಿ ಒಂದು ಕೋಟಿ ರೂಪಾಯಿ ಪರಿಹಾರ ದೊರೆಯಲಿದೆ.

ದೇಶದ ಪ್ರಮುಖ ಸಫಾರಿ ಕೇಂದ್ರಗಳಲ್ಲಿ ಬಂಡೀಪುರವೂ ಒಂದು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಸಫಾರಿ ಮೂಲಕ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಪ್ರವಾಸಿಗರ ಮೇಲೆ ಪ್ರಾಣಿಗಳು ದಾಳಿ ನಡೆಸುವುದು, ಅಟ್ಟಾಡಿಸಿಕೊಂಡು ಬರುವ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಬಂಡೀಪುರಕ್ಕೆ ಆಗಮಿಸುವ ಸಫಾರಿಗರಿಗೆ ಒಂದು ಕೋಟಿ ರೂ. ಮೊತ್ತದ ವಿಮಾ ಸೌಲಭ್ಯವನ್ನು ಅರಣ್ಯ ಇಲಾಖೆ ಕಲ್ಪಿಸಿದೆ.

ಪ್ರವಾಸಿಗರಿಗೆ ಒಂದು ಕೋಟಿ ರೂ. ವಿಮೆ : ಬಂಡೀಪುರಕ್ಕೆ ಆಗಮಿಸುವ ಎಲ್ಲರಿಗೂ ಈ ವಿಮಾ ಸೌಲಭ್ಯ ಅನ್ವಯವಾಗಲಿದೆ. ಈ ಯೋಜನೆಗೆ ಅರ್ಹರಾಗಲು ಪ್ರತ್ಯೇಕ ನೋಂದಣಿ ಅಗತ್ಯ ಇಲ್ಲ. ಸಫಾರಿಗೆ ತೆರಳಿರುವ ಟಿಕೆಟ್​ ಇದ್ದರೆ ಈ ವಿಮಾ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಕಾಡಿನೊಳಗೆ ಪ್ರಾಣ ಹಾನಿ ಸಂಭವಿಸಿದರೆ ಅರಣ್ಯ ಇಲಾಖೆಯಿಂದ ಆರ್ಥಿಕ ನೆರವು ಸಿಗಲಿದೆ ಎಂದು ಬಂಡೀಪುರ ಸಿಎಫ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಸಫಾರಿಗೆ ವೇಳೆ ಪ್ರಾಣ ಹಾನಿ ಸಂಭವಿಸಿದರೆ ಅಥವಾ ಸಫಾರಿ ವೇಳೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ 1 ಕೋಟಿ ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಪ್ರತಿವರ್ಷ 1 ರಿಂದ 1.5 ಲಕ್ಷ ಮಂದಿ ಸಫಾರಿ ಮೂಲಕ ಬಂಡೀಪುರವನ್ನು ವೀಕ್ಷಣೆ ಮಾಡುತ್ತಾರೆ.ಹುಲಿ, ಆನೆ ಗಣತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ : ಕಳೆದ ಎರಡು ತಿಂಗಳ ಹಿಂದೆ ನಡೆದ ಸಮೀಕ್ಷೆಯ ವರದಿಯಂತೆ, ಹುಲಿ ಗಣತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಆನೆಗಳ ಸಂಖ್ಯೆಯಲ್ಲೂ ಮೊದಲ ಸ್ಥಾನ ಪಡೆದಿತ್ತು. ಜಿಲ್ಲೆಯ ಬಂಡೀಪುರವು ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ಅರಣ್ಯ ಪ್ರದೇಶವಾಗಿದ್ದು, 1116 ಗಜಗಳಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿತ್ತು.

ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 484 ಆನೆಗಳು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 557 ಆನೆಗಳು, ಕಾವೇರಿ ವನ್ಯಜೀವಿ ಧಾಮದಲ್ಲಿ 236 ಆನೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಒಟ್ಟು ರಾಜ್ಯದಲ್ಲಿ 6395 ಆನೆಗಳಿವೆ ಎಂದು ವರದಿ ತಿಳಿಸಿತ್ತು. 2023ರ ಮೇ 17ರಿಂದ 19ರ ವರೆಗೆ ರಾಜ್ಯದ ವಿವಿಧೆಡೆ 3400 ಮಂದಿ ಆನೆ ಗಣತಿ ಕಾರ್ಯ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News