ಶೇ.40 ಕಮಿಷನ್‌ ಕೇಸ್ ತನಿಖೆ | ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

Update: 2023-08-21 16:12 GMT

ಬೆಂಗಳೂರು, ಆ. 21: 'ಶೇ.40ರಷ್ಟು ಕಮಿಷನ್ ಆರೋಪದ ಕುರಿತು ತನಿಖೆ ನಡೆಸಲು ನ್ಯಾ.ನಾಗಮೋಹನ್‍ದಾಸ್ ಸಮಿತಿಯನ್ನು ನೇಮಿಸಲಾಗಿದೆ. ನಾಗಮೋಹನ್‍ದಾಸ್ ಅವರು ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸುವ ವಿಶ್ವಾಸ ನಮಗಿಲ್ಲ' ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಸಿ.ಟಿ.ರವಿ, 'ದತ್ತಪೀಠದ ವಿಚಾರ ಸೇರಿದಂತೆ ಹಲವು ತನಿಖೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಮರ್ಜಿಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದರು ಎಂದು ಅವರು ವಿವರಿಸಿದರು. ನಮಗೆ ಗೊತ್ತಿರುವ ಪ್ರಕಾರ ಒಂದು ಟೂಲ್‍ಕಿಟ್ ರೂಪದಲ್ಲಿ ನಾಗಮೋಹನ್‍ದಾಸ್ ಸಮಿತಿ ರಚಿಸಿದ್ದಾರೆ' ಎಂದು ಆಕ್ಷೇಪಿಸಿದರು.

‘ಅನಿಯಮಿತ ವಿದ್ಯುತ್ ಕಡಿತ ರಾಜ್ಯ ಸರಕಾರದ ಕೊಡುಗೆಯಾಗಿದ್ದು, ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಸರಕಾರ ತೊಡಗಿದೆ. ಹುದ್ದೆಗಳನ್ನು ಹರಾಜಿಗೆ ಹಾಕಲಾಗುತ್ತಿದೆ ಎಂದು ದೂರಿದರು.

ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಸ್‍ಸಿಎಸ್‍ಪಿ-ಟಿಎಸ್‍ಪಿಯ 11ಸಾವಿರ ಕೋಟಿ ರೂ.ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿದ್ದ ಮತ್ತು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಮೊಕದ್ದಮೆ ಹೂಡುತ್ತಿದ್ದಾರೆ. ಈ ಮೂಲಕ ಯಾರು ತನ್ನನ್ನು ಪ್ರಶ್ನಿಸುತ್ತಾರೋ ಅವರ ವಿರುದ್ಧ ಕೇಸು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಇದೆಲ್ಲದರ ವಿರುದ್ಧ ಇದೇ ಆ. 28ರಂದು ಸೋಮವಾರ ಬೆಂಗಳೂರಿನಲ್ಲಿ ಒಂದು ಹೋರಾಟ ಹಮ್ಮಿಕೊಂಡಿದ್ದೇವೆ. ಇದಲ್ಲದೆ ಸೆಪ್ಟೆಂಬರ್ 8ರ ವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ವಿಚಾರವನ್ನೂ ಮುಂದಿಟ್ಟು ಹೋರಾಟ ನಡೆಸಲಾಗುವುದು. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಬೇಕಿಲ್ಲ. ಈ ಸರಕಾರದ ಕಾರ್ಯವೈಖರಿಗೆ ನಾವೇನೂ ಕನ್ನಡಿ ಹಿಡಿಯಬೇಕಾಗಿಲ್ಲ. ಬಿ.ಆರ್.ಪಾಟೀಲ, ಬಸವರಾಜ ರಾಯರೆಡ್ಡಿಯವರು ಕನ್ನಡ ಹಿಡಿಯುತ್ತಿದ್ದಾರೆ ಎಂದು ಅವರು ನುಡಿದರು.

ವಿಸ್ತೃತ ಚರ್ಚೆ: ಕೋರ್ ಕಮಿಟಿ ಸಭೆಯು ಎರಡೂವರೆ ಗಂಟೆಗಳ ಕಾಲ ವಿವಿಧ ವಿಚಾರಗಳ ಕುರಿತು ಚರ್ಚಿಸಿದೆ. ಪ್ರಚಲಿತ ರಾಜಕಾರಣ, ಸಂಘಟನಾತ್ಮಕ ವಿಚಾರಗಳೂ ಒಳಗೊಂಡಂತೆ ಮುಂಬರುವ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಳು, ಜಿ.ಪಂ., ತಾ.ಪಂ., ಬಿಬಿಎಂಪಿ ಚುನಾವಣೆ, ಲೋಕಸಭಾ ಚುನಾವಣೆ ಸೇರಿ ವಿವಿಧ ವಿಷಯಗಳ ವಿಸ್ತೃತವಾದ ಚರ್ಚೆ ನಡೆಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News