ಮೈಸೂರು, ರಾಯಚೂರು ವಿಮಾನ ನಿಲ್ದಾಣಗಳಿಗೆ 57.63 ಕೋಟಿ ರೂ.ಮಂಜೂರು: ಸಚಿವ ಎಂ.ಬಿ.ಪಾಟೀಲ್

Update: 2024-03-04 14:09 GMT

ಬೆಂಗಳೂರು: ಮೈಸೂರು ಮತ್ತು ರಾಯಚೂರು ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಒಟ್ಟಾಗಿ 57.63 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ 14.62 ಕೋಟಿ ರೂ.ರಾಯಚೂರು ವಿಮಾನ ನಿಲ್ದಾಣದ ಕೆಲಸಗಳಿಗೆ ವಿನಿಯೋಗವಾಗಲಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಈ ಹಣ ಬಳಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ತುಮಕೂರು-ದಾವಣಗೆರೆ ಮತ್ತು ಗದಗ-ವಾಡಿ ರೈಲ್ವೆ ಯೋಜನೆಗಳಿಗೆ ಕ್ರಮವಾಗಿ 50 ಕೋಟಿ ಮತ್ತು 43.32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಒಟ್ಟು 93.32 ಕೋಟಿ ರೂ.ಗಳನ್ನು ಈ ಎರಡೂ ಯೋಜನೆಗಳಿಗೆ ಒದಗಿಸಿದಂತಾಗಿದೆ ಎಂದು ಹೇಳಿದರು.

ತುಮಕೂರನ್ನು ಮಧ್ಯ ಕರ್ನಾಟಕದೊಂದಿಗೆ ಬೆಸೆಯಲಿರುವ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ತ್ವದ್ದಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಭಾಗಗಳಿಗೆ ತ್ವರಿತ ರೈಲು ಸಂಚಾರ ಸಾಧ್ಯವಾಗಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಗದಗ-ವಾಡಿ ರೈಲು ಮಾರ್ಗದ ಅಭಿವೃದ್ಧಿಯಿಂದ ಹುಬ್ಬಳ್ಳಿಯನ್ನು ಒಳಗೊಂಡು ಕಿತ್ತೂರು ಕರ್ನಾಟಕ ಮತ್ತು ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಿಗೆ ಸುಲಭವಾಗಿ ತಲುಪಬಹುದಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿ ಮೂಲಸೌಕರ್ಯ ವೃದ್ಧಿ ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆಯಲಿದೆ ಎಂದು ಅವರು ವಿವರಿಸಿದರು.

ರೈಲ್ವೆ ಯೋಜನೆಗಳು ಮೂಲತಃ ಕೇಂದ್ರ ಸರಕಾರಕ್ಕೆ ಸೇರಿದ್ದರೂ ಕೆಲವು ಯೋಜನೆಗಳಿಗೆ ತಗುಲುವ ಒಟ್ಟು ವೆಚ್ಚದಲ್ಲಿ ಶೇ.50ರಷ್ಟನ್ನು ರಾಜ್ಯ ಸರಕಾರವೆ ಭರಿಸುತ್ತದೆ. ಭೂಸ್ವಾಧೀನ ಪ್ರಕ್ರಿಯೆಯು ಮೇಲ್ಕಂಡ ಎರಡೂ ಯೋಜನೆಗಳ ವ್ಯಾಪ್ತಿಯಲ್ಲಿ ಅಂತಿಮ ಹಂತದಲ್ಲಿದೆ. ಇದು ಮುಗಿದ ಕೂಡಲೇ ಯೋಜನೆಯ ಕಾಮಗಾರಿಗಳು ಕ್ಷಿಪ್ರ ಗತಿಯಲ್ಲಿ ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ದಿಮೆಗಳು ನೆಲೆಯೂರುತ್ತಿದ್ದು, ಕೃಷಿ ಆಧಾರಿತ ಕೈಗಾರಿಕೆಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾರುಕಟ್ಟೆ ವಿಸ್ತರಣೆ, ಸುಲಭ ಸಾಗಾಟ, ಸುಗಮ ಮತ್ತು ತ್ವರಿತ ಪ್ರಯಾಣ ಇವುಗಳನ್ನು ಪರಿಗಣಿಸಿ, ಎಲ್ಲ ಕಡೆಗಳಲ್ಲೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಈ ದೃಷ್ಟಿಯಿಂದ ಮೈಸೂರು ಮತ್ತು ರಾಯಚೂರು ವಿಮಾನ ನಿಲ್ದಾಣ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸುಸಜ್ಜಿತ ವಿಮಾನ ನಿಲ್ದಾಣ ಇರಬೇಕೆನ್ನುವುದು ಸರಕಾರದ ಆಶಯವಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News