ಜಿಎಸ್‍ಟಿ ತೆರಿಗೆಯಿಂದ ರಾಜ್ಯಕ್ಕೆ 59,274 ಕೋಟಿ ರೂ.ನಷ್ಟ: ಸಿಎಂ ಸಿದ್ದರಾಮಯ್ಯ

Update: 2024-02-16 11:43 GMT

ಬೆಂಗಳೂರು: ಕೇಂದ್ರ ಸರಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ತೆರಿಗೆಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 59,274 ಕೋಟಿ ರೂ.ಗಳ ನಷ್ಟವಾಗಿ

ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿ: 2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯು ಶೇ.18ರಷ್ಟು ಹೆಚ್ಚಳ ಕಂಡಿದೆ. ಸ್ವಂತ ತೆರಿಗೆ ರಾಜಸ್ವವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಶೇ.12ರಷ್ಟು ಬೆಳವಣಿಗೆಯನ್ನು ಸಾಧಿಸಲಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಪ್ರಮಾಣ ಹೆಚ್ಚಾಗಿ, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ.

2017ರಿಂದ 2023-24ರವರೆಗೆ ರಾಜ್ಯದಲ್ಲಿ ಒಟ್ಟು 4,92,296 ಕೋಟಿ ರೂ.ಗಳ ಜಿಎಸ್‍ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ವಾಸ್ತವಿಕವಾಗಿ ರಾಜ್ಯದಲ್ಲಿ 3,26,764 ಕೋಟಿ ರೂ.ಗಳ ಜಿಎಸ್‍ಟಿ ತೆರಿಗೆ ಸ್ವೀಕೃತವಾಗಿದೆ. ಜಿಎಸ್‍ಟಿ ತೆರಿಗೆ ಸಂಗ್ರಹಣೆಯಲ್ಲಿನ ಕೊರತೆ 1,65,532 ಕೋಟಿ ರೂ.ಗಳಿಗೆ ಎದುರಾಗಿ, ಕೇಂದ್ರ ಸರಕಾರವು ರಾಜ್ಯಕ್ಕೆ ಕೇವಲ 1,06,258 ಕೋಟಿ ರೂ.ಪರಿಹಾರವನ್ನು ಮಾತ್ರ ಬಿಡುಗಡೆ ಮಾಡಿದೆ.

ರಾಜ್ಯದ ಆರ್ಥಿಕತೆ: ರಾಜ್ಯದ ಆರ್ಥಿಕತೆಯು 2023-24ನೇ ಸಾಲಿನಲ್ಲಿ ಶೇ.6.6ರಷ್ಟು ಸ್ಥಿರ ಬೆಲೆಗಳಲ್ಲಿ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2023-24ನೆ ಸಾಲಿನಲ್ಲಿ ಸೇವಾ ವಲಯವು ಶೇ.8.7ರಷ್ಟು ಮತ್ತು ಕೈಗಾರಿಕೆ ವಲಯವು ಶೇ.7.5ರಷ್ಟು ಬೆಳವಣಿಗೆ ಸಾಧಿಸಿದೆ.

ಪ್ರಸಕ್ತ ವರ್ಷದಲ್ಲಿ ಮುಂಗಾರು ವೈಫಲ್ಯದಿಂದ ರಾಜ್ಯವು ತೀವ್ರ ಬರಗಾಲವನ್ನು ಎದುರಿಸಬೇಕಾಯಿತು. ಇದರಿಂದಾಗಿ ಕೃಷಿ ಕ್ಷೇತ್ರವು ಶೇ.1.8ರಷ್ಟು ಋಣಾತ್ಮಕ ಬೆಳವಣಿಗೆ ಹೊಂದಿದೆ. ಪ್ರಸಕ್ತ ವರ್ಷದ ಮೊದಲ ಆರು ತಿಂಗಳಲ್ಲಿ ದೇಶಕ್ಕೆ ವಿದೇಶಿ ನೇರ ಹೂಡಿಕೆಯ ಕುಸಿತದ ನಡುವೆಯೂ, ರಾಜ್ಯದಲ್ಲಿ 2023ರ ಸೆಪ್ಟೆಂಬರ್ ಅಂತ್ಯದವರೆಗೆ 2.8 ಶತಕೋಟಿ ಅಮೆರಿಕನ್ ಡಾಲರ್ ಗಳಷ್ಟು ವಿದೇಶಿ ಹೂಡಿಕೆಯಾಗಿದೆ.

ರಾಜ್ಯದ ಜಿಎಸ್‍ಡಿಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಬದಲಾವಣೆ ಹಾಗೂ 1971ರ ಬದಲು 2011ರ ಜನಗಣತಿ ವರದಿಯ ಬಳಕೆಯಿಂದಾಗಿ ಅಭಿವೃದ್ಧಿಶೀಲ ರಾಜ್ಯಗಳಿಗೆ ಭಾರಿ ನಷ್ಟವುಂಟಾಗಿದೆ. 14ನೆ ಹಣಕಾಸು ಆಯೋಗ ಶಿಫಾರಸ್ಸು ನೀಡಿದ್ದ ಹಂಚಿಕೆಯ ಸೂತ್ರವನ್ನು ಪಾಲಿಸಿದ್ದರೆ ಕರ್ನಾಟಕ ರಾಜ್ಯಕ್ಕೆ 2,77,350ಕೋಟಿ ರೂ.ಗಳ ತೆರಿಗೆ ಪಾಲು ಸ್ವೀಕೃತವಾಗುತ್ತಿತ್ತು. ಆದರೆ 15ನೆ ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ 2,15,253 ಕೋಟಿ ರೂ.ಗಳು ಮಾತ್ರ ಹಂಚಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸಂಪುಟದ ಮಾರ್ಗದರ್ಶನದೊಂದಿಗೆ ವಿಷಯ ತಜ್ಞರನ್ನು ಒಳಗೊಂಡ ತಾಂತ್ರಿಕಕೋಶವನ್ನು ರಚಿಸಿ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಮತ್ತು ಅನುದಾನಗಳನ್ನು ಪಡೆಯಲು ಒಂದು ಜ್ಞಾಪನಾ ಪತ್ರವನ್ನು ಸಿದ್ಧಪಡಿಸಿ ಸಮರ್ಥವಾದ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಅಂಕಿ ಅಂಶಗಳೊಂದಿಗೆ 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

2017-18 ರಿಂದ 2023-24ರ ಅವಧಿಯಲ್ಲಿ ಶೇ.153ರಷ್ಟು ಸೆಸ್ ಮತ್ತು ಸರ್ ಚಾರ್ಜ್ ಹೆಚ್ಚಾಗಿದೆ. ಸೆಸ್ ಮತ್ತು ಸರ್‍ಚಾರ್ಜ್‍ಗಳನ್ನು ಕೇಂದ್ರವು ರಾಜ್ಯಗಳೊಂದಿಗೆ ಹಂಚಿಕೆ ಮಾಡಿದ್ದರೆ, ರಾಜ್ಯಗಳಿಗೆ ಒಟ್ಟು 11,34,301 ಕೋಟಿ ರೂ.ಗಳು ಹಂಚಿಕೆಯಾಗುತ್ತಿತ್ತು. ಇದರಿಂದ ಕರ್ನಾಟಕ ರಾಜ್ಯಕ್ಕೆ ಮಾತ್ರ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 45,322 ಕೋಟಿ ರೂ.ಗಳ ನಷ್ಟ ಉಂಟಾಗಿದೆ.

ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯದ ಅಸಮಾನತೆಗಳಿಂದ ತತ್ತರಿಸಿರುವ ಬಡವರಿಗೆ ನೇರವಾಗಿ ಪ್ರಯೋಜನವಾಗುವ ಕಲ್ಯಾಣ ಯೋಜನೆಗಳಿಗೆ ಆಯವ್ಯಯ ಹಂಚಿಕೆಯನ್ನು ಹೆಚ್ಚಿಸುವುದು ರಾಜ್ಯದ ಕರ್ತವ್ಯವಾಗಿದೆ. ರಾಜಸ್ವ ಕೊರತೆಯಲ್ಲಿ ಹೆಚ್ಚಳವಾದರೂ ಸಹ, ಅಭಿವೃದ್ಧಿಯ ಫಲಗಳು ಬಡಜನತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕಲ್ಯಾಣ ವೆಚ್ಚಗಳು ಅವಶ್ಯಕ. ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ನಿರ್ಗತಿಕರ ನೆರವಿಗೆ ರಾಜ್ಯ ಸರಕಾರ ಬರದಿದ್ದರೆ ರಾಜಸ್ವ ಹೆಚ್ಚುವರಿ ಸಾಧನೆಯು ಅರ್ಥಹೀನವಾಗುತ್ತದೆ.

ನಾವು ರಾಜಸ್ವ ಕೊರತೆಯ ಆಯವ್ಯಯವನ್ನು ಮಂಡಿಸಿದ್ದರೂ, 2024-25ರ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ 1,20,373 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಿರುತ್ತೇವೆ. ಅಲ್ಲದೆ ಬಂಡವಾಳ ವೆಚ್ಚಕ್ಕೆ ಅನುದಾನದ ಕೊರತೆ ಉಂಟಾಗದಂತೆ, ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ.ಯ ಶೇ.3ರೊಳಗೆ ಮತ್ತು ಒಟ್ಟು ಬಾಕಿಯಿರುವ ಹೊಣೆಗಾರಿಕೆಗಳನ್ನು ಜಿ.ಎಸ್.ಡಿ.ಪಿ.ಯ ಶೇ.25ರೊಳಗೆ ಕಾಯ್ದುಕೊಳ್ಳುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಪಾಲಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News