ಮಲ ಹೊರುವ ಕೆಲಸ ಮಾಡಿಸಿದರೆ ಮುಲಾಜಿಲ್ಲದೆ ಕ್ರಮ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Update: 2024-01-31 14:08 GMT

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಲ ಹೊರುವ ಪದ್ದತಿ ಇರಕೂಡದು. ಯಾರಾದರೂ ಮಲ ಹೊರುವ ಕೆಲಸ ಮಾಡಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಸಂತನಗರದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಆಯೋಗದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್– ಒಂದು ಬಾರಿ ನಗದು ಸಹಾಯಧನ ವಿತರಣೆ ಹಾಗೂ ಪುನರ್ವಸತಿ ಸಮಾವೇಶ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಘನತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನಮ್ಮ ಪಕ್ಷದ ಮತ್ತು ನಮ್ಮ ಬದ್ಧತೆ. ಹೀಗಾಗಿ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಸಫಾಯಿ ಕರ್ಮಚಾರಿಗಳ ಸಂಬಳವನ್ನು 7 ಸಾವಿರದಿಂದ 17ಕ್ಕೆ ಏರಿಸಿದ್ದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಲ ಹೊರುವ ಪದ್ದತಿಗೆ ಅವಕಾಶವೇ ಇಲ್ಲ. ಯಾರಾದರೂ  ಕೆಲಸ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ವರಿಸಿದರು.

ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು 7.5 ಲಕ್ಷ ನೆರವು ನೀಡುವ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದು ನಮ್ಮ ಸರ್ಕಾರವೇ. ನಾನು ಮುಖ್ಯಮಂತ್ರಿಯಾಗಿ ಈ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದ ಅವರು, ಅಂಬೇಡ್ಕರ್ ಸಂವಿಧಾನ ನೀಡದೇ ಹೋಗಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಆದ್ದರಿಂದ ಸಂವಿಧಾನ ವಿರೋಧಿಗಳು ನಮ್ಮ ವಿರೋಧಿಗಳು ಎನ್ನುವುದನ್ನು ನಾವು-ನೀವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ವಿರೋಧಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸಿ ಎಂದು ಕರೆ ನೀಡಿದರು.

ಕಟ್ಟಕಡೆಯ ಸಮಾಜಕ್ಕೆ ಅವಕಾಶ: ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಇತಿಹಾಸದಲ್ಲೇ ಮೊದಲ ಬಾರಿಗೆ 101 ಶೋಷಿತ ಸಮುದಾಯಗಳ ಪಟ್ಟಿಯಲ್ಲಿ ಕೊನೆಯ ಹೆಸರಾಗಿ ಗುರುತಿಸಿಕೊಂಡಿರುವ ಸಫಾಯಿ ಕರ್ಮಚಾರಿಗಳ ಬದುಕಿಗೆ ನೇರವಾಗಿ ಹಣಕಾಸಿನ ನೆರವನ್ನು ನೀಡುವ ಕಾರ್ಯಕ್ರಮ ಇದಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು 4000 ಮಂದಿ ಸಫಾಯಿ ಕರ್ಮಚಾರಿಗಳಿಗೆ ತಲಾ 40 ಸಾವಿರ ರೂಪಾಯಿಗಳ ನೇರ ಚೆಕ್ ಅನ್ನು ವಿತರಿಸಲಾಯಿತು ಎಂದರು.

ಸಮಾವೇಶದಲ್ಲಿ ಶಾಸಕರಾದ ನರೇಂದ್ರಸ್ವಾಮಿ, ಬಸಂತಪ್ಪ, ಶ್ರೀನಿವಾಸ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News