ಕಬ್ಬಿನ ತೂಕದಲ್ಲಿನ ವಂಚನೆ ತಡೆಗೆ ಡಿಜಿಟಲ್ ಯಂತ್ರ ಅಳವಡಿಸಲು ಕ್ರಮ: ಸಚಿವ ಶಿವಾನಂದ ಪಾಟೀಲ್

Update: 2023-12-12 11:29 GMT

ಬೆಳಗಾವಿ: ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ರೈತರ ಕಬ್ಬಿನ ತೂಕದಲ್ಲಿನ ಮೋಸ ತಡೆಗಟ್ಟಲು ತಪ್ಪು ಮಾಡುವ ಕಾರ್ಖಾನೆ ಮಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಲಕ್ಷ್ಮಣ ಸವದಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿನ ಕಬ್ಬಿನ ತೂಕದಲ್ಲಿನ ಮೋಸ ತಡೆಗೆ ಈಗಾಗಲೇ ಸಭೆಯನ್ನು ಮಾಡಲಾಗಿದೆ. ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಬೇಕಿದೆ. ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಒಟ್ಟು 24 ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿವೆ. ಪ್ರಸಕ್ತ ಸಾಲಿನ ಹಂಗಾಮಿನಲ್ಲಿ 76 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ. ಮುಂದಿನ ವರ್ಷ ಇಲಾಖೆಯಿಂದಲೇ ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದಯಂತ್ರಗಳನ್ನು ಅಳವಡಿಸಲಾಗುವುದು. ಅಲ್ಲದೆ, ಸಕ್ಕರೆ ಸಂಸ್ಥೆಯ ಆಯುಕ್ತರ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು’ ಎಂದರು.

ರಾಜ್ಯದಲ್ಲಿ ಮಳೆ ಕೊರತೆ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಒಂದೂವರೆ ಲಕ್ಷ ಟನ್ ಕಬ್ಬು ನುರಿಸುವಿಕೆ ಪ್ರಮಾಣ ಕಡಿಮೆಯಾಗಿದೆ. 2 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಎಥೆನಾಲ್ ಘಟಕ ಸಂಬಂಧ ಕೇಂದ್ರ ಹೊರಡಿಸಿರುವ ಆದೇಶ ಎಥೆನಾಲ್ ಘಟಕಗಳಿಗೆ ಹೂಡಿಕೆ ಮಾಡಿರುವ ಮಾಲಕರಿಗೆ ಮಾರಕವಾಗುವ ಸಾಧ್ಯತೆಯಿದೆ. ಹಾಗಾಗಿ, ಕೇಂದ್ರ ತನ್ನ ಆದೇಶ ಮರುಪರಿಶೀಲಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News