ಪೌರ ಕಾರ್ಮಿಕನ ಕ್ಷಮೆ ಕೇಳಿದ ನಟಿ ರಚಿತಾ ರಾಮ್
ಬೆಂಗಳೂರು: ನಗರದ ಲಾಲ್ ಬಾಗ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ನಟಿ ರಚಿತಾ ರಾಮ್ ಸೋಮವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಟಿ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ತಾಗಿದೆ, ಈ ವೇಳೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದರು.
ಈ ಘಟನೆಯ ವೀಡಿಯೊ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಳಿಕ ಇದೀಗ ಲಾಲ್‌ಬಾಗ್ ಸಿಬ್ಬಂದಿಯನ್ನು ನಟಿ ತಮ್ಮ ಮನೆಗೆ ಆಹ್ವಾನಿಸಿ ಕ್ಷಮೆ ಕೇಳಿದ್ದಾರೆ.
ರಚಿತಾ ರಾಮ್, ಕಪ್ಪು ಬಣ್ಣದ ಕಾರಿನಲ್ಲಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅಲ್ಲಿ ಕಸ ಹಾಯುತ್ತಿದ್ದ ಪೌರ ಕಾರ್ಮಿಕರೊಬ್ಬರು ಚೀಲ ಹಿಡಿದು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಾರೆ. ಅದೇ ವೇಳೆ ಅಲ್ಲಿಗೆ ಬಂದ ರಚಿತಾ ರಾಮ್ ಕಾರು, ಆ ಪೌರ ಕಾರ್ಮಿಕನಿಗೆ ತಾಗಿದ್ದು, ಕಾರು ಸ್ವಲ್ಪ ನಿಧಾನವಾಗಿ ಬರುತ್ತಿದ್ದರಿಂದ ಪೌರ ಕಾರ್ಮಿಕ ಕೂದಲೆಳೆ ಅಂತರದಲ್ಲಿ ಯಾವುದೇ ಸಮಸ್ಯೆ ಆಗದೆ ಪಾರಾಗಿದ್ದಾರೆ.
ಕ್ಷಮೆ ಕೇಳಿದ ನಟಿ
ʼʼನಾನು ಲಾಲ್‌ಬಾಗ್ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನನ್ನ ಕಾರು ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕರಿಗೆ ತಾಗಿದೆ. ನನ್ನ ಹಾಗೂ ನನ್ನ ಕಾರು ಚಾಲಕನ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ. ಇದು ನಿನ್ನೆ ನನ್ನ ಗಮನಕ್ಕೆ ಬಂದಿರಲಿಲ್ಲ. ಇಲ್ಲವಾದ್ರೆ ನಿನ್ನೆಯೇ ನಾನು ಕ್ಷಮೆ ಕೇಳುತ್ತಿದ್ದೆ. ಅಲ್ಲಿಯೇ ಇದ್ದ ನನ್ನ ಸ್ನೇಹಿತರು ಕೂಡ ನನ್ನ ಗಮನಕ್ಕೆ ತಂದಿರಲಿಲ್ಲ. ಏನಿದ್ದರೂ ಅದು ನನ್ನ ಮತ್ತು ನನ್ನ ಕಾರು ಚಾಲಕನ ತಪ್ಪು, ಈಗ ಸಿಬ್ಬಂದಿಯನ್ನು ಮನೆಗೆ ಕರೆದು ನಾನೇ ಅವರ ಬಳಿ ಕ್ಷಮೆ ಕೇಳಿದ್ದೇನೆʼʼ ಎಂದು ನಟಿ ರಚಿತಾ ರಾಮ್ ಇನ್ಸ್ಟಾಗ್ರಾಮ್ ನಲ್ಲಿ ಪೌರ ಕಾರ್ಮಿಕನ ಜೊತೆ ಮಾತನಾಡಿರುವ ವೀಡಿಯೊ ಪೋಸ್ಟ್ ಮಾಡಿದ್ದಾರೆ.