7ನೇ ವೇತನ ಆಯೋಗದ ವರದಿ ಬಂದ ಬಳಿಕ ಸರಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಏಳನೆ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಮಂಗಳವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. 7ನೆ ವೇತನ ಆಯೋಗ ರಚನೆಯಾಗಿ 12 ತಿಂಗಳಾಗಿದೆ. ಮಾರ್ಚ್ವರೆಗೆ ಕಾಲಾವಧಿ ವಿಸ್ತರಣೆ ಯಾಗಿದ್ದು, ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ವೇತನ ಪರಿಷ್ಕರಣೆ ಮಾಡಿ ಘೋಷಣೆ ಮಾಡಬೇಕು ಎಂದು ನಿಯೋಗ ಮನವಿ ಮಾಡಿತು.
ಹೊಸ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದ 11,366 ಜನರಿಗೆ ಹಳೆ ಪಿಂಚಣಿ ಯೋಜನೆಗೆ ಸೇರ್ಪಡೆ ಗೊಳಿಸಲಾಗಿದೆ. ಉಳಿದವರನ್ನೂ ಹಳೆ ಪಿಂಚಣಿ ಯೋಜನೆಗೆ ವ್ಯಾಪ್ತಿಗೆ ಸೇರಿಸಿ, ಪಿಂಚಣಿಗೆ ನೀಡುತ್ತಿರುವ ಕೊಡುಗೆಯನ್ನು ನಿಲ್ಲಿಸಲು ಆದೇಶಿಸಬೇಕು ಎಂದು ಸರಕಾರಿ ನೌಕರರ ನಿಯೋಗ ಕೋರಿತು.
ತೀವ್ರತರವಾದ ಏಳು ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವ ‘ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ’ಗೆ ಚಾಲನೆ ನೀಡಲಾಗಿತ್ತು. ಸರಕಾರಿ ನೌಕರರ ಕುಟುಂಬದವರಿಗೆ ಉಚಿತ ಆರೋಗ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿ ಮಾಡಿದರು.