ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಹೆಸರು: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

Update: 2024-01-12 15:24 GMT

Photo: X/@siddaramaiah

ಶಿವಮೊಗ್ಗ: ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭುವಿನ ಹೆಸರನ್ನು ಶಿವಮೊಗ್ಗದ ಫ್ರೀಡಂ ಪಾರ್ಕಿಗೆ ಇಡುತ್ತೇವೆ ಎಂದು ಯುವನಿಧಿ  ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ರಾಜ್ಯ ಸರ್ಕಾರದ ಯುವ ನಿಧಿ ಕಾರ್ಯಕ್ರಮದಲ್ಲಿ ಸಿಎಂ ಭಾಷಣಕ್ಕೂ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಒಬ್ಬ ಪ್ರಸಿದ್ಧ ಕವಿ, ಹೆಸರಾಂತ ತತ್ವಜ್ಞಾನಿಯಾಗಿದ್ದ ಅಲ್ಲಮ ಪ್ರಭುಗಳು ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರಿಡಬೇಕು ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಈ ವೇಳೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರ ಚಂದ್ರಶೇಖರ್ ಅಜಾದ್ ಹೆಸರಿಡಬೇಕು. ಈ ಹಿಂದೆಯೇ ಬಿಎಸ್‌ವೈ ಪ್ರಸ್ತಾಪಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಈ ಫ್ರೀಡಂ ಪಾರ್ಕ್‌ಗೆ ಚಂದ್ರಶೇಖರ್ ಅಜಾದ್ ಹೆಸರಿಡಿ ಎಂದರು. ಈ ವೇಳೆ ಬೇಡ ಬೇಡ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಕಾರ್ಯಕರ್ತರು ಕೂಗಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ನಗರದಲ್ಲಿ ಈ ಫ್ರೀಡಂ ಪಾರ್ಕ್ ಮಾಡಿದ್ದೆ. ಶಾಸಕರಾದ ಚೆನ್ನಬಸಪ್ಪನವರೇ, ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು. ನಿಮ್ಮ ಊರಿನವರು , ನನಗಂತೂ ಮಧು ಬಂಗಾರಪ್ಪ ಅವರು ಹೇಳಿದಂತೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದು  ಹೇಳಿದರು.

ಅಲ್ಲದೇ ಶರಾವತಿ ಮುಳುಗಡೆ ಸಂತ್ರಸ್ಥರ ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸಿಕೊಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News