ಬ್ಯಾಂಕ್‍ಗೆ ಸಾಲ ಮರುಪಾವತಿಸದೆ ವಂಚನೆ ಆರೋಪ: ರಮೇಶ್ ಜಾರಕಿಹೊಳಿ ಸೇರಿ ಮೂವರ ವಿರುದ್ಧ ಎಫ್‍ಐಆರ್

Update: 2024-01-07 13:01 GMT

ಬೆಂಗಳೂರು: ಬ್ಯಾಂಕ್ ಸಾಲ ಮರುಪಾವತಿಸದೆ ವಂಚಿಸಿರುವ ಆರೋಪದಡಿ ಮಾಜಿ ಸಚಿವ, ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ನಗರದ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದು ವರದಿಯಾಗಿದೆ.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹ ಬ್ಯಾಂಕ್‍ಗಳಿಂದ ಸಾಲ ಪಡೆದು ಪಾವತಿಸದೇ ವಂಚಿಸುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಎಂಬುವರು ದೂರು ದಾಖಲಿಸಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ಫಾಲ್ಸ್ ರಸ್ತೆಯಲ್ಲಿರುವ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪೆನಿಯ ಅಧ್ಯಕ್ಷ ರಮೇಶ್ ಜಾರಕಿಹೊಳಿ ಹಾಗೂ ನಿರ್ದೇಶಕ ವಸಂತ್ ವಿ.ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಎ.ಪಾವಡೆ ಅವರು ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್‍ನ ಷರತ್ತುಗಳನ್ನು ಒಪ್ಪಿ, ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಅದರ ಸಮೂಹ ಬ್ಯಾಂಕ್‍ಗಳಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತಗಳಲ್ಲಿ 2013ರ ಡಿಸೆಂಬರ್ 7ರಿಂದ 2017ರ ಮಾರ್ಚ್ 31ರವರೆಗೆ ಹಂತ ಹಂತವಾಗಿ 232 ಕೋಟಿ 88 ಲಕ್ಷ ರೂ.ಸಾಲ ಪಡೆದಿದ್ದಾರೆ.

ಆದರೆ, ಸಾಲ ಮರುಪಾವತಿಸದೆ ಒಟ್ಟು 439 ಕೋಟಿ 7 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಸಾಲ ಪಡೆಯುವ ಸಮಯದಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪೆನಿಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದ ಆರೋಪಿತರು ನಂತರ, ಬ್ಯಾಂಕ್‍ನ ಗಮನಕ್ಕೆ ತರದೇ ಕಂಪೆನಿಯಲ್ಲಿ ತಮ್ಮ ಸ್ಥಾನಗಳಿಂದ ಹೊರಬಂದು, ಬೇರೆಯವರನ್ನು ಆ ಸ್ಥಾನಗಳಿಗೆ ನೇಮಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ದೂರಿನನ್ವಯ ರಮೇಶ್ ಜಾರಕಿಹೊಳಿ, ವಸಂತ್ ವಿ.ಪಾಟೀಲ್ ಹಾಗೂ ಶಂಕರ್ ಪಾವಡೆ ವಿರುದ್ಧ ವಿ.ವಿ.ಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ), 406 (ಕ್ರಿಮಿನಲ್ ನಂಬಿಕೆ ದ್ರೋಹ), 34 (ಸಾಮೂಹಿಕ ಕ್ರಿಮಿನಲ್ ಉದ್ದೇಶ) ಆರೋಪದಡಿ ಎಫ್‍ಐಆರ್ ದಾಖಲಾಗಿರುವುದಾಗಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News