ಅಂಕೋಲಾ: ಗುಡ್ಡ ಕುಸಿತ ಪ್ರಕರಣ; ಪ್ರಗತಿ ವರದಿ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

Update: 2024-07-24 05:10 GMT

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಪ್ರಕರಣದ ಪ್ರಗತಿ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ‌.

ಶೀಘ್ರ ಕ್ರಮಕ್ಕೆ ನಿರ್ದೇಶನ ಕೋರಿ ವಕೀಲ ಸಿಜಿ ಮಲಾಯಿಲ್, ಸುಭಾಷ್ ಚಂದ್ರನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ‌ ವಿಚಾರಣೆ ನಡೆಸಿತು.

ನಾಪತ್ತೆಯಾಗಿರುವ 10 ಜನರಲ್ಲಿ 7 ಶವ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರದ ಡೆಪ್ಯುಟಿ ಸಾಲಿಸಿಟರ್ ಜನರಲ್ ಹೆಚ್ ಶಾಂತಿಭೂಷಣ್ ಈ ವೇಳೆ ಮಾಹಿತಿ ನೀಡಿದರು.

ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿದ್ದಾರೆ‌. ಎನ್ ಡಿ ಆರ್ ಎಫ್, ಸೇನಾ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿವೆ. ಕೋಸ್ಟಲ್ ಗಾರ್ಡ್, ನೇವಿ ತಂಡದಿಂದಲೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಾಪತ್ತೆಯಾದ ಗ್ಯಾಸ್ ಟ್ಯಾಂಕರ್ ಪತ್ತೆಗೆ ಯತ್ನ ನಡೆದಿದೆ.‌ ಗುಡ್ಡ ಕುಸಿತದ ಬಳಿಕ ನದಿಯಲ್ಲಿ ಟ್ಯಾಂಕರ್ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಹೈ ರೆಸಲ್ಯೂಷನ್ ಸೋನಾರ್ ತಂತ್ರಜ್ಞಾನ ದಿಂದಲೂ ನೇವಿಯಿಂದ ಪತ್ತೆ ಪ್ರಯತ್ನ ಮಾಡಲಾಗುತ್ತಿದೆ. ಪುಣೆಯ ಸೇನಾ ಬಾಂಬ್ ಪತ್ತೆ ತಜ್ಞರಿಂದಲೂ ವಿಶೇಷ ಯಂತ್ರ ಬಳಕೆ ಮಾಡಲಾಗಿದೆ‌. 20 ಮೀಟರ್ ಆಳದ ಲೋಹ ಗುರುತಿಸುವ ಯಂತ್ರ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಹೈಕೋರ್ಟ್ ಗೆ ಡೆಪ್ಯುಟಿ ಸಾಲಿಸಿಟರ್ ಜನರಲ್  ಹೆಚ್.  ಶಾಂತಿಭೂಷಣ್ ಮಾಹಿತಿ ನೀಡಿದ್ದಾರೆ.

ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಪ್ರಗತಿ ಬಗ್ಗೆ ವರದಿ ಸಲ್ಲಿಸಲು ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News