ಬಜೆಟ್‌ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಆಶಾ ಕಾರ್ಯಕರ್ತೆಯರು

Update: 2024-02-14 17:14 GMT

ಬೆಂಗಳೂರು : ಆಶಾ ಕಾರ್ಯಕರ್ತೆಯರ ಸಂಘಟನೆಯ ಪದಾಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ವಿವರಿಸಿ ಬಜೆಟ್ ನಲ್ಲಿ ಅನುಕೂಲ ಒದಗಿಸುವಂತೆ ಮನವಿ ಮಾಡಿದರು.

ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳಿಂದ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದ ಆಶಾ ಕಾರ್ಯಕರ್ತೆಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ಕರೆಯುವ ಭರವಸೆ ಹಿನ್ನೆಲೆಯಲ್ಲಿ ತಮ್ಮ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.

ಬುಧವಾರ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಕೈಗೊಂಡಿದ್ದ ಆಶಾ ಕಾರ್ಯಕರ್ತೆಯರ ನಿಯೋಗ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿತು. ಈ ವೇಳೆ ಮಾತನಾಡಿದ ಸಿಎಂ, ಆಶಾಗಳ ಸಮಸ್ಯೆ ಬಗೆಹರಿಸುವ ಸಂಬಂಧ ಆರೋಗ್ಯ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಅಧಿವೇಶನದ ನಂತರ ಕರೆಯಲಾಗುವುದು ಎಂದು ಭರವಸೆ ನೀಡಿದರು.

ಆಶಾ ಕಾರ್ಯಕರ್ತೆಯರ ‘ವಿಧಾನಸೌಧ ಚಲೋ’ ಅಂಗವಾಗಿ ಫೆ.13ರಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಮಂಗಳವಾರ ಸಂಜೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಭೇಟಿ ನೀಡಿ ಕೆಲ ಭರವಸೆಗಳು ನೀಡಿದ್ದರು. ಆದರೆ, ಪ್ರಮುಖ ಬೇಡಿಕೆಗಳು ಈಡೇರದ ಕಾರಣ ನಿಯೋಗವು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿ ಬೇಡಿಕೆ ಈಡೇರಿಸಲು ಒತ್ತಾಯಿಸಿತ್ತು.

ಆ ಹಿನ್ನೆಲೆಯಲ್ಲಿ ತಮ್ಮ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್ ಯಾದಗಿರಿ, ಕಾರ್ಯದರ್ಶಿ ನಾಗಲಕ್ಷ್ಮಿ ತಿಳಿಸಿದ್ದಾರೆ. ಈ ವೇಳೆ ಪದಾಧಿಕಾರಿಗಳಾದ ಉಮಾದೇವಿ, ರಮಾ ಟಿ.ಸಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News