15ಸಾವಿರ ರೂ.ಗೌರವಧನ ನೀಡಲು ಆಗ್ರಹಿಸಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು

Update: 2024-02-13 12:55 GMT

ಬೆಂಗಳೂರು: ಮಾಸಿಕ ಗೌರವಧನ 15 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಹಾಗೂ ಗೌರವಧನ ವಿತರಣೆಯಲ್ಲಿನ ವಂಚನೆ ತಡೆಯಲು ಆರ್‌ಸಿಎಚ್ ಪೋರ್ಟಲ್ ಅನು ಡೀಲಿಂಕ್ ಮಾಡಬೇಕೆಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದಿದ್ದಾರೆ.

ಮಂಗಳವಾರ ಎಐಯುಟಿಯುಸಿ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹದಲ್ಲಿ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ‘ರಾಜ್ಯದ ಎಲ್ಲ ಜನರಿಗೆ ಗ್ಯಾರಂಟಿ ನೀಡುವ ಸರಕಾರಕ್ಕೆ ಕೇವಲ 42ಸಾವಿರ ಜನರಿಗೆ ಗ್ಯಾರಂಟಿ ನೀಡುವುದು ಅಸಾಧ್ಯವೇ?. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮುಖಂಡರನ್ನು ಸರಕಾರ ಹಲವು ಬಾರಿ ಸಭೆ ಕರೆದರೂ ಯಾವುದೇ ಪ್ರಯೋಜನವಾಗಿಲ್ಲ. ಡಿಜಿಟಲ್ ಇಂಡಿಯಾ ಎಂದು ಹೇಳಲಾಗುತ್ತದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಕೊಟ್ಟಿರುವ ಮೊಬೈಲ್‍ಫೋನ್‍ಗೆ ಸರಿಯಾದ ನೆಟ್‍ವರ್ಕ್ ಇಲ್ಲ. ಆರ್ ಸಿಎಚ್ ಪೋರ್ಟಲ್‍ನಿಂದ ಆಗುತ್ತಿರುವ ಮೋಸಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.

ಲೇಖಕಿ ರೂಪಾ ಹಾಸನ ಮಾತನಾಡಿ, ‘ಹಲವು ವರ್ಷದಿಂತ ಆಶಾ ಕಾರ್ಯಕರ್ತೆಯರು ಕಡಿಮೆ ವೇತನದೊಂದಿಗೆ ಹೆಚ್ಚು ಕೆಲಸ ಮಾಡಿದ್ದರ ಪರಿಣಾಮವಾಗಿ ಆರೋಗ್ಯ ಇಲಾಖೆಯಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಆಶಾ ಕಾರ್ಯಕರ್ತೆಯರಿಗೆ ಸರಕಾರ ನೀಡುತ್ತಿರುವ ಹಣದಿಂದ ಗೌರವಧನಕ್ಕೆ ಅವಮಾನವಾದಂತೆ ಕಾಣುತ್ತಿದೆ. ಹೀಗಾಗಿ ಕೂಡಲೇ ಅವರ ಗೌರವಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್‍ಯುಸಿಐಸಿ ಕಾರ್ಯದರ್ಶಿ ಕೆ.ಉಮಾ, ಮೆಡಿಕಲ್ ಸರ್ವೀಸ್ ಸೆಂಟರ್ ನ ಉಪಾಧ್ಯಕ್ಷೆ ಡಾ.ಸುಧಾ ಕಾಮತ್, ಸಂಘದ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ, ಎಐಎಂಎಸ್‍ಎಸ್ ಅಧ್ಯಕ್ಷೆ ಎಂ.ಎನ್. ಮಂಜುಳಾ, ಹೋರಾಟಗಾರರ ಉಗ್ರನರಸಿಂಹೇಗೌಡ, ಪ್ರಮೀಳಾ, ಕೆ.ವಿ.ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

‘ಮಹಿಳಾ ಕಾರ್ಮಿಕರು ಶೋಷಿತರಲ್ಲೇ ಶೊಷಿತರು. ದೇಶ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ದೇಶದಲ್ಲಿ 100ಕ್ಕೆ ಶೇ.95ರಷ್ಟು ಜನರು ಬಡವರಾಗಿಯೇ ಉಳಿದ್ದಾರೆ. ಕೋವಿಡ್ ಸಮದಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಸೇವೆಯನ್ನು ಹೊಗಳಿದ್ದಾರೆ. ಆದರೆ, ಅವರ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ದೇಶದಲ್ಲಿ ಕಾರ್ಮಿಕರ ಹಣ ಕಿತ್ತುಕೊಂಡು ಬಂಡವಾಳಶಾಹಿಗಳ ಜೇಬು ತುಂಬಿಸುವ ಕೆಲಸ ನಡೆಯುತ್ತಿದೆ’

ಕೆ.ರಾಧಾಕೃಷ್ಣನ್, ಎಐಯುಟಿಯುಸಿ ಅಧ್ಯಕ್ಷ

‘ಹಿಂದೆ ಜಮೀನ್ದಾರರು ಶ್ರೀಮಂತರು ಬಡವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವ ಜೀತ ಪದ್ಧತಿಯಿತ್ತು. ಅದೇ ರೀತಿ ಸರಕಾರವು ಆಶಾ ಕಾರ್ಯಕರ್ತೆಯರನ್ನು ದುಡಿಕೊಳ್ಳುತ್ತಿದೆ. ಕಣ್ಣು, ಕಿವಿಗಳಿಲ್ಲದ ಸರಕಾರಕ್ಕೆ ಆಶಾ ಕಾರ್ಯಕರ್ತೆಯರ ಕೂಗು ಕೇಳಿಸುವುದಿಲ್ಲ. ಸಂಕಷ್ಠಕ್ಕೆ ಸಿಲುಕಿದ ಕೆಳವರ್ಗದ ಮಹಿಳೆಯರು ಆಶಾಗಳು. ಕಾರ್ಯಕರ್ತೆಯರ ಪೇಮೆಂಟ್ ಪ್ರಕ್ರಿಯೆಯಿಂದ ಆರ್ ಸಿಎಚ್ ಪೋರ್ಟಲ್ ಅನ್ನು ಡೀಲಿಂಕ್ ಮಾಡಬೇಕು’

ರೂಪಾ ಹಾಸನ, ಲೇಖಕಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News