ಪ್ರವಾದಿ ಜನ್ಮದಿನದ ಕಾರ್ಯಕ್ರಮದಲ್ಲಿ ಔರಂಗಜೇಬನನ್ನು ಜೋಡಿಸುವುದು ಮೂರ್ಖತನ: ಚಿಂತಕ ರಹಮತ್‌ ತರೀಕೆರೆ

Update: 2023-10-02 08:56 GMT

ಬೆಂಗಳೂರು: ಪ್ರವಾದಿ ಜನ್ಮದಿನದ ಕಾರ್ಯಕ್ರಮದಲ್ಲಿ ಔರಂಗಜೇಬ್‌ ದ್ವಾರವನ್ನು ನಿರ್ಮಿಸಿರುವ ಕುರಿತು ಮುಸ್ಲಿಂ ಧಾರ್ಮಿಕ ಗುರುಗಳು, ಚಿಂತಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡದ ಹಿರಿಯ ಚಿಂತಕ, ಲೇಖಕ ಪ್ರೊ. ರಹಮತ್‌ ತರೀಕೆರೆಯವರು ಕೂಡಾ ಈ ಘಟನೆಯನ್ನು ವಿರೋಧಿಸಿದ್ದಾರೆ.

“ಔರಂಗಜೇಬನನ್ನು ಪ್ರವಾದಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಜೋಡಿಸಿ, ಭಾರತೀಯ ಮುಸ್ಲಿಮರ ಹೊಸ ಐಡೆಂಟಿಟಿಯನ್ನಾಗಿ ಮಾಡಲು ಯತ್ನಿಸಿರುವ ಕ್ರಮವು, ಧಾರ್ಮಿಕವಾಗಿ ತಪ್ಪು ಮಾತ್ರವಲ್ಲ‌, ರಾಜಕೀಯವಾಗಿ ಮೂರ್ಖತನ ಕೂಡ” ಎಂದು ರಹಮತ್‌ ತರೀಕೆರೆ ಅವರು ಹೇಳಿದ್ದಾರೆ. 

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ತರೀಕೆರೆ ಅವರು ಈ ಕ್ರಮವನ್ನು, “ಮುಸ್ಲಿಮರನ್ನು ಧರ್ಮದ ಕಾರಣಕ್ಕೆ ದ್ವೇಷಿಸುವವರ ಬತ್ತಳಿಕೆಯಲ್ಲಿ ಬಾಣವನ್ನು‌ ನಾವೇ ಚೂಪುಮಾಡಿ ಇಟ್ಟಂತೆ. ಅವರ ಕೋವಿಗಳಿಗೆ ನಾವೇ ಮುತುವರ್ಜಿಯಿಂದ ಮದ್ದುಗುಂಡು ತುಂಬಿದಂತೆ” ಎಂದು ವಿಶ್ಲೇಷಿಸಿದ್ದಾರೆ.

“ಪ್ರವಾದಿಗಳು ವಿದ್ಯೆಯ ಕಲಿಕೆಗೆ ಗಂಡು ಹೆಣ್ಣು ಭೇದ ಮಾಡಬಾರದು ಎಂದು ನಂಬಿದವರು. ಭಾರತದ ಮೊದಲ‌ ಶಿಕ್ಷಕಿಯರಲ್ಲಿ ಒಬ್ಬರಾದ ಫಾತಿಮಾ ಶೇಖ್ ಮುಸ್ಲಿಮರ ಅಸ್ಮಿತೆಯಾದರೆ, ಬೇರೆಯದೇ ಅರ್ಥ, ಬೇರೆಯದೇ ಸಂದೇಶ ಕೊಡುತ್ತದೆ. ರಾಜಕೀಯ ಅನಕ್ಷರತೆಯಷ್ಟು ಘೋರವಾದುದು ಆತ್ಮಹತ್ಯಾತ್ಮಕವಾದುದು ಬೇರೆಯಿಲ್ಲ. ಈಗ ಬೇಕಾದುದು ಜೋಶ್ (ಆವೇಶ) ಅಲ್ಲ. ಹೋಶ್ (ಪ್ರಜ್ಞೆ)” ಎಂದು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News