ಬೆಂಗಳೂರು | ಪಂಚೆ ಧರಿಸಿದ್ದಕ್ಕೆ ಮಾಲ್‍ನೊಳಗೆ ಪ್ರವೇಶ ನಿರಾಕರಿಸಿದ್ದ ಸಿಬ್ಬಂದಿಯಿಂದಲೇ ರೈತನಿಗೆ ಸನ್ಮಾನ!
ಬೆಂಗಳೂರು : ಪಂಚೆ ಧರಿಸಿದ್ದಾರೆ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಮಾಲ್‍ನೊಳಗೆ ಪ್ರವೇಶಕ್ಕೆ ಅನುಮತಿ ನೀಡದೆ ರೈತನಿಗೆ ಅಪಮಾನ ಮಾಡಿದ್ದ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ವತಃ ಮಾಲ್ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ರೈತನನ್ನು ಸನ್ಮಾನಿಸಿದ ಅಪರೂಪದ ಘಟನೆ ಜರುಗಿದೆ.
ನಿನ್ನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‍ಗೆ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಿಸಲು ಆಗಮಿಸಿತ್ತು. ಇದೇ ವೇಳೆ ಅವರ ಜೊತೆಗೆ ಫಕೀರಪ್ಪ ಎಂಬ ರೈತರು ಕೂಡ ಬಂದಿದ್ದರು. ಅಲ್ಲಿನ ಭದ್ರತಾ ಸಿಬ್ಬಂದಿ ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಮಾಲ್ ಒಳಗೆ ಬಿಡದೆ ಅವಮಾನಿಸಿ ಹೊರಗೆ ಕಳುಹಿಸಿದ್ದರು.
ಇದನ್ನು ಅವರ ಪುತ್ರ ಮೊಬೈಲ್‍ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದಕ್ಕೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾಲ್‍ನವರು ಕೂಡಲೇ ರೈತನ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮಾಲ್ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಅದರಂತೆ ಬುಧವಾರ ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಸೇರಿದಂತೆ ಹಲವು ಕಾರ್ಯಕರ್ತರು, ಮಾಲ್ ಮುಂದೆ ಜಮಾಯಿಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ರೀತಿಯ ಘಟನೆ ಮೂಲಕ ರೈತರಿಗೆ ಅವಮಾನ ಮಾಡಲಾಗಿದೆ. ಕೂಡಲೇ ಮಾಲ್ ಮಾಲಕರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನೊಂದೆಡೆ ಮಾಲ್‍ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಸೂಕ್ತ ನಿಯಮ ರೂಪಿಸಲಿದೆ: ‘ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರಕಾರ ಪ್ರಯತ್ನಿಸಲಿದೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‍ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‍ಗೆ ಹೋಗಬಹುದೆಂದು ನಮ್ಮ ಸರಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರಕಾರ ನಿಯಮ ತರಬೇಕು’
-ಚೆಲುವರಾಯಸ್ವಾಮಿ ಕೃಷಿ ಸಚಿವ
ಕೇಸು ದಾಖಲಿಸಲಿ: ಮಾಲ್‍ನಲ್ಲಿ ಪಂಚೆಯಲ್ಲಿ ಬಂದ ರೈತನಿಗೆ ಪ್ರವೇಶ ಕೊಡದೆ ಅಪಮಾನ ಮಾಡಿರುವ ಮಾಲ್‍ನ ಮಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಬೇಕು. ರೈತರು ಬೆಳೆದ ಅನ್ನ ತಿನ್ನುವ ಯಾರೇ ಆದರೂ ಇನ್ನು ಮುಂದೆ ಇಂತಹ ನಡವಳಿಕೆ ತೋರಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಸಿಎಂ ಪಂಚೆಯಲ್ಲಿ ಬರುತ್ತಾರೆ ಅವರಿಗೂ ಪ್ರವೇಶ ನೀಡದೆ ನಿಲ್ಲಿಸುತ್ತಾರೆಯೇ? ಇದು ರಾಜ್ಯದ ರೈತರಿಗೆ ಮಾಡಿದ ಅಪಮಾನ’
-ಕುರುಬೂರು ಶಾಂತಕುಮಾರ್ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ