ಬೆಂಗಳೂರು | ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ: ರ‍್ಯಾಪಿಡೋ ಬೈಕ್ ಚಾಲಕನ ಬಂಧನ

Update: 2023-07-23 18:31 GMT

ಬೆಂಗಳೂರು, ಜು.23: ರೈಡ್ ಬುಕ್ ಮಾಡಿದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ  ಪ್ರಕರಣಕ್ಕೆ ಸಂಬಂಧಿಸಿ ರ‍್ಯಾಪಿಡೋ ಬೈಕ್ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರ್ಯಾಪಿಡೋ ಬೈಕ್ ಕ್ಯಾಪ್ಟನ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದ ಯುವತಿಯೊಬ್ಬಳು ತನಗಾದ ಕಹಿ ಅನುಭವದ ಕುರಿತು ಟ್ವೀಟ್ ಮಾಡುವ ಮೂಲಕ ರ‍್ಯಾಪಿಡೋ ಸೇವೆ ಬಳಸುವವರ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದಳು.

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೌರ್ಯ ಖಂಡಿಸಿ ಶುಕ್ರವಾರ ಮಧ್ಯಾಹ್ನ ನಗರದ ಟೌನ್‍ಹಾಲ್ ಬಳಿ ನಡೆದಿದ್ದ ಪ್ರತಿಭಟನೆಗೆ ಯುವತಿ ಬಂದಿದ್ದರು. ಬಳಿಕ ಟೌನ್ ಹಾಲ್‍ನಿಂದ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು ರ‍್ಯಾಪಿಡೋ ಆಟೋ ಬುಕ್ ಮಾಡಿದ್ದಳು. ಆದರೆ ಪದೇ ಪದೆ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಬೈಕ್ ಆಯ್ಕೆ ಆಯ್ದುಕೊಂಡಿದ್ದಳು. ಆ್ಯಪ್‍ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿಯಲ್ಲಿದೆ ಎಂದಿದ್ದ ಚಾಲಕ ಬೇರೆ ಬೈಕಿನಲ್ಲಿ ಬಂದಿದ್ದ. ಬಳಿಕ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈಯಲ್ಲಿ ಚಾಲನೆ ಮಾಡುತ್ತ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಳು.

ಇಷ್ಟಾದರೂ ಸಹ ವಿಧಿಯಿರದೇ ಸುಮ್ಮನಿದ್ದ ಯುವತಿ, ಮನೆಗೆ 200 ಮೀಟರ್ ದೂರದಲ್ಲಿರುವಾಗಲೇ ರೈಡ್ ಮುಗಿಸಿ ಹಣ ಪಾವತಿಸಿ ಮನೆಗೆ ತೆರಳಿದ್ದಳು. ಆದರೆ ಡ್ರಾಪ್ ಮಾಡಿದ ನಂತರ ಪದೇ ಪದೆ ಆಕೆಗೆ ಕರೆ ಮಾಡಿದ್ದ ರ‍್ಯಾಪಿಡೋ ಬೈಕ್ ಕ್ಯಾಪ್ಟನ್ ಅಸಂಬದ್ಧವಾಗಿ ಮೆಸೇಜ್ ಮಾಡಿದ್ದಾನೆ. ಆರೋಪಿಯ ಕಿರುಕುಳದಿಂದ ನೊಂದಿರುವ ಯುವತಿ, ಆತ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡುವ ಮೂಲಕ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಳು. ಅಲ್ಲದೇ ರ್ಯಾಪಿಡೋದ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದಳು. ಯುವತಿಯ ಟ್ವೀಟ್ ಗಮನಿಸಿದ ಪೊಲೀಸರು ಆಕೆಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದರು.

ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಆಗ್ನೆಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ, ಬೆಂಗಳೂರು ಪೊಲೀಸರು ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ. ನಾವು ಸದಾ ಕಾನೂನು ಕಾಪಾಡಲು ಬದ್ಧರಾಗಿದ್ದೇವೆ. ಆರೋಪಿಯ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News