ಬೆಂಗಳೂರು | ಕೃಷಿಮೇಳಕ್ಕೆ ಚಾಲನೆ; ಮೊದಲ ದಿನವೇ 80 ಲಕ್ಷ ರೂ.ಗೂ ಅಧಿಕ ವಹಿವಾಟು

Update: 2023-11-17 17:42 GMT

ಬೆಂಗಳೂರು, ಜ.17: ನಗರದ ಜಿಕೆವಿಕೆ ಆವರಣದಲ್ಲಿ ನಡೆಯುವ ನಾಲ್ಕು ದಿನಗಳ ಕೃಷಿಮೇಳಕ್ಕೆ ಶುಕ್ರವಾರದಂದು ಮುಖ್ಯಮಂತ್ರಿಗಳಿಂದ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನವೇ 80 ಲಕ್ಷ ರೂ. ಗಳಿಗೂ ಅಧಿಕ ವಹಿವಾಟು ನಡೆದಿದೆ.

ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದಲೂ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಮೇಳಕ್ಕೆ ಬೇಟಿ ನೀಡಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ರಿಯಾಯಿತಿ ದರದ ಊಟ ಸವಿದರು.

ಮೇಳದಲ್ಲಿ ಒಟ್ಟು 625 ಮಳಿಗೆಗಳನ್ನು ತೆರೆಯಲಾಗಿದ್ದು, ಕೃಷಿ ಪರಿಕರಗಳ ಮಳಿಗೆಗಳು ಮತ್ತು ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮಳಿಗೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದೆ.

ಹಾಗೆಯೇ ರೈತರ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭೌತಿಕವಾಗಿ ಮತ್ತು ಝೂಮ್ ಸಭೆ ಮೂಲಕ ನೇರ ಪರಿಹಾರ ನೀಡಲಾಗುತ್ತಿದೆ. ಗುಲಾಬಿಯ ಬದಲಿಗೆ ಆರ್ನಮೆಂಟಲ್ ಸೂರ್ಯಕಾಂತಿಯನ್ನು ಕೃಷಿ ವಿವಿ ಆವರಣದಲ್ಲಿ ಬೆಳೆಯಲಾಗಿದೆ. ಈ ಹೂಗಳಿಂದಲೇ ಮೇಳದ ಮುಖ್ಯ ವೇದಿಕೆಯನ್ನು ಅಲಂಕಾರಗೊಳಿಸಿರುವುದು ವಿಶೇಷವಾಗಿತ್ತು.

ಬಾಡಲ್ ಬದನೆ, ಯುರೋಪಿಯನ್/ಇಂಗ್ಲಿಷ್ ಸೌತೆ, ಚೆರ್ರಿ ಟೊಮೋಟಾ, ಪೆÇೀಲ್ ಬೀನ್ಸ್, ಐಸ್‍ಬರ್ಗ್, ಬ್ರೊಕೋಲಿಯಂತಹ ವಿಶಿಷ್ಟ ಸೊಪ್ಪು ತರಕಾರಿ ಹಾಗೂ ಹೂ ತಳಿಗಳು ನೋಡುಗರನ್ನು ಆಕರ್ಷಿಸುತ್ತಿದ್ದವು. ಡಾರ್ಪರ್, ರ್ಯಾಂಬುಲೆಟ್, ಬನ್ನೂರು, ಎಳಗ, ಸಾನನ್, ನಾರಿಸುವರ್ಣ ತಳಿಯ ಕುರಿಗಳು, ಫಿಜ್ಜಲ್, ರೋಸ್ ಕುಂಬ್, ಸಿಲ್ಕಿ, ಮಲೇಷಿಯನ್, ಸೆರಾಮ, ಹೌಡನ್, ಸೆಬ್‍ರೈಟ್, ಕೊಲಂಬಿಯನ್ ಬರಾಮ ಕೋಳಿ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ವೇದಿಕೆಯಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ದೇವನಹಳ್ಳಿ ತಾಲೂಕಿನ ಬಿ.ಆರ್. ಮಂಜುನಾಥ, ಡಾ. ಎಂ.ಎಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿಯನ್ನು ಶಿವಮೊಗ್ಗದ ಎಚ್. ಟಿ. ರಾಜೇಂದ್ರರಿಗೆ ನೀಡಲಾಯಿತು.

ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ರಾಮನಗರದ ಬಿ.ಪಿ.ವಾಸು, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯನ್ನು ಶ್ರೀನಿವಾಸಪುರದ ಎ.ವಿ.ರತ್ನಮ್ಮ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಚನ್ನರಾಯಪಟ್ಟಣದ ಬಿ.ಜಿ. ಮಂಜೇಗೌಡರಿಗೆ ನೀಡಲಾಯಿತು.

ಗ್ಯಾರಂಟಿ ಕಾರ್ಯಕ್ರಮಗಳಾದ ಸರಕಾರಿ ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅನುವು ಮಾಡಿರುವ ಶಕ್ತಿ ಯೋಜನೆ, ಮನೆಯ ಯಜಮಾನಿಯರಿಗೆ ಆರ್ಥಿಕ ನೆರವು ಕಲ್ಪಿಸುವ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಪ್ರತಿ ಫಲಾನುಭವಿಗೆ 10 ಕೆಜಿ ಉಚಿತ ಆಹಾರಧಾನ್ಯ ನೀಡುವ ಅನ್ನಭಾಗ್ಯ ಯೋಜನೆ ಹಾಗೂ ಯುವಕರ ಶ್ರೇಯೋಭಿವೃದ್ಧಿಗಾಗಿ ಯುವನಿಧಿ ಯೋಜನೆಯ ಮಾಹಿತಿಯನ್ನು ಮೇಳದಲ್ಲಿ ಪ್ರದರ್ಶಿಸಲಾಗಿದೆ.

‘ಕೃಷಿಮೇಳದಲ್ಲಿ ನಿರ್ಮಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯ ಸರಕಾರದ ಕಾರ್ಯಕ್ರಮಗಳ ಮಾಹಿತಿ ಪ್ರದರ್ಶನದ ಮಳಿಗೆ ವೀಕ್ಷಕರ ಪಾಲಿಗೆ ಸರಕಾರದ ಸೌಲಭ್ಯಗಳ ಮಾಹಿತಿ ಕೋಶವಾಗಿ ಮಾರ್ಪಡಿಸಿದೆ.






 


 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News