ಬೆಂಗಳೂರು | ಶಾಲೆಗೆ ಹುಸಿ ಬಾಂಬ್ ಬೆದರಿಕೆ ಕರೆ : ಪ್ರಕರಣ ದಾಖಲು
ಬೆಂಗಳೂರು: ಇಲ್ಲಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್‍ಪಾರ್ಕ್ ಮುಂಭಾಗದಲ್ಲಿರುವ ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆ ತಪಾಸಣೆ ನಡೆಸಿದ ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿಗಳು, ಅದೊಂದು ಹುಸಿ ಬಾಂಬ್ ಸಂದೇಶ ಎಂದು ಖಚಿತಪಡಿಸಿದ್ದಾರೆ.
ಗೋವಿಂದಪುರ ಪೆÇಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್‍ಪಾರ್ಕ್ ಮುಂಭಾಗದಲ್ಲಿರುವ ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆಗೆ ಗುರುವಾರ ಮುಂಜಾನೆ 6.57ರ ಸುಮಾರಿಗೆ ಇ-ಮೇಲ್ ಮಾಡಿರುವ ದುಷ್ಕರ್ಮಿಗಳು, ‘ಶಾಲೆ ಆವರಣದಲ್ಲಿ ಐದು ಪೈಪ್‍ಲೈನ್‍ಗಳಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನ 1.30ಕ್ಕೆ ಬಾಂಬ್ ಸ್ಫೋಟಗೊಳ್ಳಲಿದೆ’ ಎಂದು ಫಾದರ್ ಕೊಡಾಚಿ ಹೆಸರಿನ coldghost456@gmail.com ಹಾಗೂ askbirnorth@tipsglobal.net ಎಂಬ ಐಡಿಯಿಂದ ಬೆದರಿಕೆ ಕಳುಹಿಸಿದ್ದರು. ಇದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿಯು ಕೂಡಲೇ ಮಕ್ಕಳಿಗೆ ರಜೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿತ್ತು.
ವಿಷಯ ತಿಳಿದು ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿಗಳು, ಪರಿಶೀಲಿಸಿದಾಗ ಹುಸಿ ಬಾಂಬ್ ಸಂದೇಶ ಎಂಬುದು ತಿಳಿದುಬಂದಿದೆ. ಶಾಲಾ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.