ಬೆಂಗಳೂರು | ಯುವತಿಗೆ ರ‍್ಯಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು

Update: 2023-07-23 15:59 GMT

Photo- PTI

ಬೆಂಗಳೂರು, ಜು.23: ನಗರದಲ್ಲಿ ಯುವತಿಯೋರ್ವಳಿಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿರುವುದು ವರದಿಯಾಗಿದೆ.

ಯುವತಿಯು ನಗರದಲ್ಲಿ ರ್ಯಾಪಿಡೋ ಬೈಕ್ ಬುಕ್ ಮಾಡಿಕೊಂಡು ತೆರಳುವಾಗ ದಾರಿಯುದ್ದಕ್ಕೂ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ರೈಡ್ ಮುಗಿದ ಬಳಿಕ ಅಸಂಬದ್ಧವಾಗಿ ಸಂದೇಶ ರವಾನಿಸುವ ಮೂಲಕ ರ‍್ಯಾಪಿಡೋ ಚಾಲಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿರುವ ಯುವತಿ ಟ್ವಿಟರ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೌರ್ಯ ಖಂಡಿಸಿ ಶುಕ್ರವಾರ ಮಧ್ಯಾಹ್ನ ನಗರದ ಟೌನ್ ಹಾಲ್ ಬಳಿ ನಡೆದಿದ್ದ ಪ್ರತಿಭಟನೆಗೆ ಯುವತಿ ಬಂದಿದ್ದರು. ಬಳಿಕ ಟೌನ್ ಹಾಲ್‍ನಿಂದ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು ರ್ಯಾಪಿಡೋ ಆಟೋ ಬುಕ್ ಮಾಡಿದ್ದರು. ಆದರೆ, ಪದೇ ಪದೆ ಬುಕ್ಕಿಂಗ್ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಬೈಕ್ ಆಯ್ಕೆ ಆಯ್ದುಕೊಂಡಿದ್ದರು.

ಆ್ಯಪ್‍ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿಯಲ್ಲಿದೆ ಎಂದಿದ್ದ ಚಾಲಕ ಬೇರೆ ಬೈಕಿನಲ್ಲಿ ಬಂದಿದ್ದ. ಬಳಿಕ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈನಲ್ಲಿ ಚಾಲನೆ ಮಾಡುತ್ತಾ, ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಇಷ್ಟಾದರೂ ವಿಧಿ ಇಲ್ಲದೆ ಸುಮ್ಮನಿದ್ದ ಯುವತಿ, ಮನೆಗೆ 200 ಮೀಟರ್ ದೂರದಲ್ಲಿರುವಾಗಲೇ ರೈಡ್ ಮುಗಿಸಿ ಹಣ ಪಾವತಿಸಿ ಮನೆಗೆ ತೆರಳಿದ್ದಾರೆ. ಆದರೆ ಡ್ರಾಪ್ ಮಾಡಿದ ಬಳಿಕವೂ ಪದೇ ಪದೇ ಯುವತಿಗೆ ಕರೆ ಮಾಡಿದ್ದ ರ್ಯಾಪಿಡೋ ಚಾಲಕ ಅಸಂಬದ್ಧವಾಗಿ ಮೆಸೇಜ್ ಮಾಡಿದ್ದಾನೆ. ಆರೋಪಿಯ ಕಿರುಕುಳದಿಂದ ನೊಂದಿರುವ ಯುವತಿ, ಆತ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡುವ ಮೂಲಕ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ರಾಪಿಡೋದ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದಾರೆ.

ಯುವತಿಯ ಟ್ವೀಟ್ ಗಮನಿಸಿ ದೂರು ದಾಖಲಿಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News