ಬೆಂಗಳೂರು: ಕೃಷಿ ಮೇಳದಲ್ಲಿ ಜನರ ಗಮನ ಸೆಳೆದ ಬೆಲ್ಲದ ಪರಿಷೆ, ಮಧುವನ

Update: 2023-11-18 18:32 GMT

ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಪ್ರದರ್ಶಿಸಲಾದ ಬೆಲ್ಲದ ಪರಿಷೆಯು ನೋಡುಗರನ್ನು ಸೆಳೆಯುತ್ತಿದೆ. ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ ಕಾಲಘಟ್ಟದಲ್ಲಿ ಜನರಿಗೆ ಬೆಲ್ಲದ ಉಪಯೋಗವನ್ನು ತಿಳಿಸುವ ಸಲುವಾಗಿ ಮಂಡ್ಯ ಕೃಷಿ ಇಲಾಖೆಯು ಬೆಲ್ಲದ ಪರಿಷೆಯನ್ನು ಒಂದು ಮಳೆಗೆಯನ್ನು ತೆರೆದಿದೆ.

ಬೆಲ್ಲದಲ್ಲಿ ಮಳಿಗೆಯಲ್ಲೇ ಆಲೆಮನೆಯನ್ನು ಸಿದ್ಧಪಡಿಸಿ ಪ್ರೇಕ್ಷಕರಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಕೇವಲ ಬೆಲ್ಲವನ್ನು ಉಪಯೋಗಿಸುವ ನಗರದ ಮಂದಿ ಬೆಲ್ಲ ತಯಾರಿಸುವ ಆಲೆಮನೆ ನೋಡಿ ಕಣ್ತುಂಬಿಕೊಂಡರು. ಅಲ್ಲದೆ ವಿವಿಧ ಬಗೆಯ ಬೆಲ್ಲಗಳನ್ನು ನಾನಾ ಆಕಾರದಲ್ಲಿ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. 1 ಕೆ.ಜಿ.ಯಿಂದ ಹಿಡಿದು ಸುಮಾರು 10 ಕೆ.ಜಿ.ಯ ವರೆಗೆ ಬೆಲ್ಲದ ಉತ್ಪನ್ನಗಳನ್ನು ತಯಾರು ಮಾಡಲಾಗಿತ್ತು.

‘ಬೆಲ್ಲ ಬಳಸಿ, ಆರೋಗ್ಯ ಉಳಿಸಿ’ ಎಂಬ ವಾಕ್ಯದಡಿಯನ್ನು ಇಲಾಖೆಯ ಸಿಬ್ಬಂದಿಗಳು ಮಳಿಗೆ ಬಂದ ಜನರಿಗೆ ಬೆಲ್ಲವನ್ನು ಬಳಸುವುದರಿಂದ ಆಗುವ ಪ್ರಯೋಜನೆಗಳನ್ನು ತಿಳಿಸುತ್ತಿದ್ದರು. ಸಂಸ್ಕರಿಸಿದ ಸಕ್ಕರೆಗಿಂತ ಬೆಲ್ಲವು ಹೆಚ್ಚು ಆರೋಗ್ಯಕರವಾಗಿದೆ. ಬೆಲ್ಲವು ವಿವಿಧ ಖನಿಜಗಳ ವಿಶಿಷ್ಟ ಮಿಶ್ರಣವಾಗಿದೆ ಎಂದು ಸರ್ವಾಜನಿಕರಿಗೆ ಸಿಬ್ಬಂದಿಗಳು ಮಾಹಿತಿ ನೀಡಿದರು.

ಕೃಷಿಕರನ್ನು ಸೆಳೆದ ಮಧುವನ: ಕೃಷಿಮೇಳದ ಹಿನ್ನೆಲೆಯಲ್ಲಿ ಜಿಕೆವಿಕೆ ಆವರಣದಲ್ಲಿ ಹೂವು, ತರಕಾರಿ ಸೇರಿದಂತೆ ವಿವಿಧ ತಳಿಗಳ ಗಿಡಗಳನ್ನು ಬೆಳೆಸಲಾಗಿತ್ತು. ಇದರ ನಡುವೆ ಜೇನುಕೃಷಿ ವಿಭಾಗವು ಸುಮಾರು ಇಪ್ಪತ್ತಕ್ಕೂ ಅಧಿಕ ಜೇನುಪಟ್ಟಿಗೆಗಳನ್ನಿಟ್ಟು ಮಧುವನ್ನು ನಿರ್ಮಾಣ ಮಾಡಿತ್ತು. ಮಧುವನದಲ್ಲಿರುವ ಜೇನುಹುಳುಗಳು ಸೂರ್ಯಕಾಂತಿ ಸೇರಿದಂತೆ ವಿವಿಧ ಗಿಡಗಳ ಹೂವುಗಳಿಂದ ಮಕರಂಧವನ್ನು ಹೀರಿ ತಮ್ಮ ಜೇನುಪಟ್ಟಿಗೆಗಳಿಗೆ ಬರುತ್ತಿದ್ದವು. ಇದನ್ನು ನೋಡಲು ನೆರೆದಿದ್ದ ಸಾರ್ವಜನಿಕರಿಗೆ ಜೇನುಕೃಷಿ ವಿಭಾಗದ ಸಿಬ್ಬಂದಿಗಳು ಮಾಹಿತಿಯನ್ನು ನೀಡುತ್ತಿದ್ದರು.

ಇದಲ್ಲದೆ ಮಧುವನದಲ್ಲಿ ಜೇನು ಪೆಟ್ಟಿಗೆ, ಚೌಕಟ್ಟುಗಳು, ಬಾಚಾಣಿಗಳು, ಧೂಮಪಾನಿ, ಮೇಣ ಸೇರಿದಂತೆ ಜೇನುಕೃಷಿ ಸಲಕರಣೆಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಜೇನುಕೃಷಿಯಿಂದ ಉತ್ಪಾದಿಸಿದ ತುಪ್ಪವನ್ನು ಮಧುವನದಲ್ಲಿ ಸರ್ವಾಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು.

ಔಷಧೀಯ ಸಸ್ಯೋದ್ಯಾನ: ಕೃಷಿಮೇಳದ ಅಂಗವಾಗಿ ಅರ್ಧ ಎಕರೆ ಜಾಗದಲ್ಲಿ ವಿವಿಯು ಔಷಧೀಯ ಸಸ್ಯೋದ್ಯಾನವನ್ನು ನಿರ್ಮಾಣ ಮಾಡಿತ್ತು. ಅಶ್ವಗಂಧ, ತುಳಿಸಿ, ಅಲೋವೆರಾ ಮುಂತಾದ ಸಸ್ಯಗಳನ್ನು ಬೆಳೆಸಲಾಗಿತ್ತು. ಸಾರ್ವಜನಿಕರಿಗೆ ಸಸ್ಯಗಳ ಹೆಸರು, ಅದರ ಉಪಯೋಗವನ್ನು ತಿಳಿಸಲು ಫಲಕಗಳನ್ನು ಗಿಡಗಳ ಬಳಿ ಅವವಡಿಸಲಾಗಿತ್ತು.

ಇನ್ನು ಎರಡು ಎಕರೆ ಪ್ರದೇಶದಲ್ಲಿ ವಿವಿಧ ಮೇವಿನ ತಳಿಗಳನ್ನು ಬೆಳೆಯಲಾಗಿದ್ದು, ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಕೃಷಿ ವಿವಿಯು ಕೃಷಿ ಪಾಲಿಮಾರ್ ಶೆಡ್‍ನಲ್ಲಿ ಆರ್ನಮೆಂಟಲ್ ಸೂರ್ಯಕಾಂತಿ ಗಿಡಗಳನ್ನು ಬೆಳೆಸಲಾಗಿತ್ತು. ಗುಲಾಬಿಯ ಬದಲಿಗೆ ಈ ಹೂಗಳಿಂದಲೇ ಮೇಳದ ಮುಖ್ಯ ವೇದಿಕೆಯನ್ನು ಅಲಂಕಾರಗೊಳಿಸಿರುವುದು ವಿಶೇಷವಾಗಿತ್ತು.








 



 





 


 




 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News