ಬಿಟ್ ಕಾಯಿನ್ ಹಗರಣ: ಹೆಚ್ಚಿನ ತನಿಖೆಗೆ ಸಿಐಡಿಗೆ ಪತ್ರ ಬರೆದ ಬೆಂಗಳೂರು ನಗರ ಪೊಲೀಸ್ ಆಯುಕ್ತ

Update: 2023-06-26 17:35 GMT

ಬೆಂಗಳೂರು, ಜೂ.26: ಬಿಟ್ ಕಾಯಿನ್ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಿಐಡಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಬಿಟ್ ಕಾಯಿನ್ ಹಗರಣದ ಬಗ್ಗೆ ಮರುತನಿಖೆ ನಡೆಸುವುದಾಗಿ ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದ್ದರು. ಆ ಬಳಿಕ ಇದೀಗ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಈ ಹಗರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಳ್ಳುವಂತೆ ಸಿಐಡಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಈ ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದಾನೆ. ಶ್ರೀಕಿ ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‍ಫಾರ್ಮ್‍ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‍ಗಳನ್ನು ಕದ್ದಿದ್ದ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

ವಿವಿಧ ಸೈಬರ್ ಅಪರಾಧಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ಇತರರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News