ಬಿಜೆಪಿ - ಕಾಂಗ್ರೆಸ್‌ ಜಟಾಪಟಿ : ವಿಧಾನಸಭೆ ಕಲಾಪ ಗುರುವಾರಕ್ಕೆ ವಿಸ್ತರಣೆ

Update: 2024-02-28 15:01 GMT

ಫೈಲ್‌ ಚಿತ್ರ

ಬೆಂಗಳೂರು : ಘೋಷಣೆ ಕೂಗಿದ ಆರೋಪ ವಿಚಾರ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ, ಆಡಳಿತ-ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದು ತೀವ್ರ ಚರ್ಚೆಗೆ ಗ್ರಾಸವಾಯಿತು. ಅಲ್ಲದೆ, ಉಭಯ ಸದನಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪವು ನಡೆಯಿತು. ಕಲಾಪವು ಸ್ಪೀಕರ್ ನಿಯಂತ್ರಣಕ್ಕೆ ಬಾರದೆ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಲಾಪವನ್ನು ಗುರುವಾರ (ಫೆ.29) ಬೆಳಗ್ಗೆ 9ಗಂಟೆಗೆ ಮುಂದೂಡಲಾಯಿತು.

ಬುಧವಾರ ವಿಧಾನಸಭೆ ಕಲಾಪ ಆರಂಭದಿಂದಲೂ ಹಲವು ಬಾರಿ ಗದ್ದಲ ಉಂಟಾಗಿ ಎರಡು ಬಾರಿ ಕಲಾಪ ಮುಂದೂಡಬೇಕಾಯಿತು. ಇನ್ನೊಂದೆಡೆ, ಘಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.

ಆರಂಭದಲ್ಲಿಯೇ ವಿಪಕ್ಷ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ‘ಘಟನೆಯ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕಬೇಕು. ರಾಜ್ಯಸಭೆಗೆ ಆಯ್ಕೆಯಾದ ಸೈಯದ್ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆಯಲ್ಲೇ ಈ ರೀತಿ ಘೋಷಣೆ ಕೂಗಿರುವುದು ಗಮನಾರ್ಹ. ಅವರನ್ನು ಯಾರು ಕರೆತಂದಿದ್ದರು ಎಂಬ ವಿಚಾರಗಳು ಚರ್ಚೆಯಾಗಬೇಕು. ಜತೆಗೆ, ಅವರನ್ನೆ ಸರಕಾರ ಬಂಧಿಸಿ, ವಿಚಾರಣೆ ನಡೆಸಬೇಕು ಎಂದು ಹೇಳಿದರು.

ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಪ್ರಸ್ತಾಪಿಸಿ, ‘ಒಂಬತ್ತು ತಿಂಗಳಲ್ಲಿ ಸರಕಾರದ ಧೋರಣೆಯಿಂದ ಇಂತಹ ಘಟನೆ ನಡೆಯುತ್ತದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಘಟನೆಯ ನೈತಿಕ ಹೊಣೆ ಸಿದ್ದರಾಮಯ್ಯ ಹೊರಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್, ‘ಇಲ್ಲಿನ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನದ ಪರವಾಗಿ ಪ್ರೀತಿ ತೋರಿಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯರು, ‘ಹಲವು ಕಡೆಗಳಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರು ಹಾಗೂ ಧ್ವಜಾರೋಹಣ ಮಾಡಿದವರು ಸಿಕ್ಕಿಬಿದ್ದಿದ್ದಾರೆ. ಅವರ ಹಿನ್ನೆಲೆ ನೋಡಿದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಅನ್ಯ ಧರ್ಮದವರ ಮೇಲೆ ಗೂಬೆ ಕೂರಿಸುವ ಹುನ್ನಾರಗಳು ನಡೆದಿದೆ’ ಎಂದು ಉಲ್ಲೇಖಿಸಿದರು.

ಕಾಂಗ್ರೆಸ್ ಸದಸ್ಯ ಟಿ.ಡಿ.ರಾಜೇಗೌಡ ಪ್ರತಿಕ್ರಿಯಿಸಿ, ‘ತಮ್ಮ ಕ್ಷೇತ್ರದಲ್ಲಿ 2020, 2022ರಲ್ಲಿ 2 ಪ್ರತ್ಯೇಕ ಪ್ರಕರಣಗಳು ನಡೆದಿವೆ. ಅದನ್ನು ಭಜರಂಗದಳ ಹಾಗೂ ಬಿಜೆಪಿ ಬೆಂಬಲಿತ ಸಂಘಟನೆಯವರು ಮಾಡಿ ಅಲ್ಪಸಂಖ್ಯಾತರ ತಲೆಗೆ ಕಟ್ಟುವ ಹುನ್ನಾರ ನಡೆಸಿದ್ದರು. ಪ್ರತಿಬಾರಿಯೂ ಈ ರೀತಿಯ ಸಂಚು ನಡೆದಿದೆ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆಗಿದ್ದರೆ ಅಂತವರನ್ನು ಗಲ್ಲಿಗೆ ಹಾಕಿ’ ಎಂದು ಹೇಳಿದರು.

ಈ ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ‘ದೇಶದ್ರೋಹದ ಘೋಷಣೆಯನ್ನು ಕೂಗಿದ್ದರೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಎಫ್‍ಎಸ್‍ಎಲ್ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಅದರ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಆರ್.ಅಶೋಕ್ ಪ್ರಸ್ತಾಪಿಸಿ, ಈ ಸರಕಾರ ಘಟನೆಯನ್ನು ಹಗುರವಾಗಿ ತೆಗೆದುಕೊಂಡಿದೆ. ಪಾಕಿಸ್ತಾನ ಪರವಾದ ಘೋಷಣೆ ಕೂಗಿದ ಬಳಿಕವೂ ಅದನ್ನು ಸಹಿಸಿಕೊಂಡರೆ ಬದುಕಿದ್ದೂ ವ್ಯರ್ಥ ಎಂದು ಒತ್ತಾಯಿಸಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗೆ ಇಳಿದು ಧರಣಿ, ಘೋಷಣೆ ಕೂಗಿದರು. ಚರ್ಚೆಯ ಉದ್ದಕ್ಕೂ ವಾಗ್ವಾದ, ಮಾತಿನ ಚಕಮಕಿಯೇ ಕಂಡಿತು. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಗುರುವಾರ (ಫೆ.29) ಬೆಳಗ್ಗೆ 9ಗಂಟೆಗೆ ಮುಂದೂಡಿಕೆ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News