ಬಿಜೆಪಿ ತೊರೆದವರನ್ನು ಮತ್ತೊಮ್ಮೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅಗತ್ಯವಿದೆ: ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವ ನಿಟ್ಟಿನಲ್ಲಿ ಪಕ್ಷ ಬಿಟ್ಟವರನ್ನು ಮತ್ತೊಮ್ಮೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಕೃಷಿ ಮತ್ತು ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಸರ್ಕಾರ ಇಲ್ಲ, ಬಿಜೆಪಿ ಸೋತಿದೆ, ಆ ಸೋಲಿನಲ್ಲಿ ಎಲ್ಲರ ಪಾಲು ಇದೆ. ಪಕ್ಷ ತೊರೆದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷವನ್ನು ಸದೃಢ ಮಾಡಬೇಕಾದ ಅಗತ್ಯವಿದೆ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಆಹ್ವಾನವಿತ್ತಿದ್ದಾರೆ.
ಮತ್ತೆ ಬಿಜೆಪಿಯನ್ನು ಕಟ್ಟಬೇಕು ಅನ್ನೋದು ನಮ್ಮ ಅಪೇಕ್ಷೆ. ವಿಶ್ವದ ಹಲವು ದೇಶಗಳು ಭಾರತ ಮತ್ತು ಮೋದಿಯನ್ನು ಎದುರು ನೋಡುತ್ತಿದೆ. ಭಾರತವನ್ನು ಮತ್ತ ಷ್ಟು ಗಟ್ಟಿ ಮಾಡಲು ಎಲ್ಲರ ಸಹಕಾರ ಬೇಕು ಎಂದರು.
ಬಿಜೆಪಿ ಸರ್ಕಾರ ರಚನೆ ಮಾಡಲು ಶಾಸಕರು, ಮುಖಂಡರು ಬಿಜೆಪಿ ಸೇರಿದ್ದರು. ಅವರೊಂದಿಗೆ ಬಿಜೆಪಿ ಅತ್ಯಂತ ಗೌರವದಿಂದ ನಡೆದುಕೊಂಡ ಬಿಜೆಪಿ ದೊಡ್ಡ ಖಾತೆಗಳನ್ನು ಕೊಟ್ಟಿತ್ತು. ದೊಡ್ಡ-ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು.ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಅವರನ್ನ ತೊಡಗಿಸಿಕೊಳ್ಳಲಾಗಿತ್ತು ಎಂದರು.
ಪಕ್ಷ ಬಿಟ್ಟವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಅಧಿಕಾರಕ್ಕಾಗಿ ಬಂದರು. ಅಧಿಕಾರ ಇಲ್ಲದಾಗ ಹೋದರು ಎಂಬ ಕೆಟ್ಟ ಹೆಸರನ್ನು ಯಾರೂ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸವಿದೆ. ಅಧಿಕಾರ ಇದ್ದಾಗ ಎಲ್ಲಾ ಅನುಭವಿಸಿದ್ದೇವೆ, ಈಗ ಬಿಜೆಪಿಯನ್ನು ಗಟ್ಟಿ ಮಾಡಬೇಕಿದೆ ಎಂದರು.