ಕಾಂಗ್ರೆಸ್ ʼಗ್ಯಾರಂಟಿʼಗಳನ್ನು ಮುಟ್ಟುವುದು ಬಿಜೆಪಿ- ಜೆಡಿಎಸ್ ಹಣೆಯಲ್ಲಿ ಬರೆದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-04-17 07:48 GMT

ಬೆಂಗಳೂರು: “ಕಾಂಗ್ರೆಸ್ ಗ್ಯಾರಂಟಿಗಳನ್ನು ಮುಟ್ಟುವುದು ಬಿಜೆಪಿ- ಜೆಡಿಎಸ್ ಹಣೆಯಲ್ಲಿ ಬರೆದಿಲ್ಲ. ಇದಕ್ಕೆ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಮತ್ತಿತರರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳನ್ನು ತೆಗೆದುಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಆದರೆ ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ್ ಅವರಿಗೆ ಗ್ಯಾರಂಟಿಗಳನ್ನು ಮುಟ್ಟಲು ರಾಜ್ಯದ ಜನ ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮೇಲಿನ ಜನರ ಪ್ರೀತಿ ಕಂಡು ಅವರಿಗೆ ಅಸೂಯೆ ಆಗಿದೆ. ಆದ್ದರಿಂದ ನಮ್ಮ ತಾಯಂದಿರ ಬಗ್ಗೆ ಮಾತನಾಡುತ್ತಿದ್ದಾರೆ. ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿರುವ ಅವರಿಗೆ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಗ್ಯಾರಂಟಿಗಳ ಅಲೆಯಿದೆ. ಇಡೀ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಿದೆ. ಮಂಗಳವಾರ ಕೇರಳ ರಾಜ್ಯ ಪ್ರವಾಸಕ್ಕೆ ಹೋಗಿದ್ದೆ, ಅಲ್ಲಿಯೂ ಸಹ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲಲಿದೆ. ಇಡೀ ದೇಶದಲ್ಲಿ 100 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಎನ್ಡಿಎ ಬದಲಾಯಿಸಿದೆ. ರಾಜ್ಯದಲ್ಲಿ 14 ಸ್ಥಾನಗಳನ್ನು ಬದಲಾಯಿಸಿದೆ. ಯಾವುದೇ ಕಾರಣಕ್ಕೂ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟ ಗೆದ್ದೇ, ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರುದ್ಯೋಗ, ಬೆಲೆಏರಿಕೆ ಸಮಸ್ಯೆಯ ಬಗ್ಗೆ ಜನರು ಚಿಂತನೆ ಮಾಡುತ್ತಿದ್ದಾರೆ. ಧರ್ಮ, ಜಾತಿ ಆದಾರದ ಮೇಲೆ ನಡೆಯುತ್ತಿರುವ ರಾಜಕಾರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಪ್ರಧಾನಿ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಹಾಲಿ ಸಂಸದರೊಬ್ಬರು 400 ಸ್ಥಾನಗಳನ್ನು ಕೊಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಎರಡು ಮೂರು ಬಾರಿ ಹೇಳಿದರು. ಅವರನ್ನು ಪಕ್ಷದಿಂದ ಉಚ್ಚಾಟಿಸುವುದಕ್ಕೆ ಬಿಜೆಪಿ ಏಕೆ ಮುಂದಾಗಿಲ್ಲ? ಸಂವಿಧಾನ ಬದಲಾವಣೆ ಹೇಳಿಕೆಯ ನಂತರ ಉತ್ತರ ಭಾರತದಲ್ಲಿ ಜನ ದಂಗೆ ಎದ್ದಿದ್ದಾರೆ. ಆದ ಕಾರಣ ಈಗ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಸವದಿಯವರು ಹೇಳುತ್ತಿದ್ದರು, ಕರಡಿ ಸಂಗಣ್ಣ ಅವರನ್ನು ನಾನೇ ದಳದಿಂದ ಬಿಜೆಪಿಗೆ ಸೇರಿಸಿದ್ದೆ ಎಂದು. ಸರಳ, ಸಜ್ಜನಿಕೆಯ ನಾಯಕ. ಬಿಜೆಪಿ ಸುಮ್ಮನೆ ಅಬ್ಬರ ಮಾಡುತ್ತಿರುವ ಹೊತ್ತಿನಲ್ಲಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಏಕೆಂದರೆ ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತ, ಕಾರ್ಯಕ್ರಮಗಳನ್ನು ಅವರು ಮೆಚ್ಚಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಬಿಜೆಪಿಯನ್ನು ರಾಜ್ಯದಲ್ಲಿ ತೊಳೆದು ಹಾಕುತ್ತಿವೆ. ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ಕೊಳೆ ತೊಳೆದಂತೆ, ರಾಜ್ಯದ ಜನತೆ ಬಿಜೆಪಿಯನ್ನು ಗುಡಿಸಿ ಹಾಕುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News