ಮುಸ್ಲಿಂ ಸಮುದಾಯವನ್ನು ಅವಹೇಳಿಸುವಂತಹ ಕಾರ್ಟೂನ್ ವಿಡಿಯೋ ಹರಿಬಿಟ್ಟ ಬಿಜೆಪಿ; ವ್ಯಾಪಕ ಆಕ್ರೋಶ
ಬೆಂಗಳೂರು: ಬಿಜೆಪಿಯ ಕರ್ನಾಟಕ ಘಟಕ ಶನಿವಾರ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ವಿಡಿಯೊವನ್ನು ಪೋಸ್ಟ್ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
"ಎಚ್ಚರ..ಎಚ್ಚರ..ಎಚ್ಚರ..!" ಎಂಬ ಶೀರ್ಷಿಕೆಯ ಈ ಆ್ಯನಿಮೇಟೆಡ್ ವಿಡಿಯೊದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಂಗ್ಯಚಿತ್ರಗಳಿವೆ. ಈ ಇಬ್ಬರು ಮುಖಂಡರ ಜತೆಗೆ ಗೂಡಿನಲ್ಲಿ ಮುಸ್ಲಿಂ ಎಂದು ಬರೆದ ಒಂದು ಮೊಟ್ಟೆ ಇಡಲಾಗಿದೆ. ಇದರ ಪಕ್ಕ ಎಸ್ಸಿ, ಎಸ್ಟಿ ಮತ್ತು ಓಬಿಸಿ ಎಂದು ಬರೆದ ಮೂರು ಮೊಟ್ಟೆಗಳಿವೆ.
ಎಕ್ಸ್ ಪ್ಲಾಟ್‍ಫಾರಂನಲ್ಲಿ ಕರ್ನಾಟಕ ಬಿಜೆಪಿ ಈ ವಿಡಿಯೊ ಪೋಸ್ಟ್ ಮಾಡಿದ್ದು, ರಾಹುಲ್‍ಗಾಂಧಿಯಾವರು ಮುಸ್ಲಿಂ ಟೋಪಿ ಹಾಕಿಕೊಂಡ ಒಂದು ಹಕ್ಕಿಗೆ ಮಾತ್ರ ಉಣಿಸುತ್ತಿರುವ ದೃಶ್ಯವಿದೆ. ಮುಸ್ಲಿಂ ಎಂಬ ಮೊಟ್ಟೆಯಿಂದ ಮರಿ ಹೊರಬರುತ್ತಿದೆ. ಆ ಹಕ್ಕಿ ಇತರ ಮೂರು ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ತಳ್ಳುತ್ತಿರುವ ದೃಶ್ಯವಿದೆ. ಆ ಬಳಿಕ ದೊಡ್ಡದಾಗಿ ನಗು ಕೇಳಿಬರುತ್ತಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೋಸ್ಟ್ ಮಾಡಲ್ಪಟ್ಟ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಬಿಜೆಪಿ ಪೋಸ್ಟ್ ಅನ್ನು ನಟ ಪ್ರಕಾಶ್ ರಾಜ್ "ನಾಚಿಕೆಗೇಡು" ಎಂದು ಬಣ್ಣಿಸಿದ್ದಾರೆ. "ಎಲ್ಲರನ್ನೂ ಒಳಗೊಳ್ಳುವ, ಶಾಂತಿಪ್ರಿಯ ಕರ್ನಾಟಕ ಮತ್ತು ದೇಶದ ಜನತೆ ಹಿಂದುತ್ವ ಪಕ್ಷಗಳಿಗೆ ಅಸಹ್ಯಕರ, ದ್ವೇಷ ಹರಡುವ, ಕೋಮು ರಾಜಕೀಯಕ್ಕೆ ಸೂಕ್ತ ಪಾಠ ಕಲಿಸಲಿದ್ದಾರೆ" ಎಂದು ಹೇಳಿದ್ದಾರೆ.
ಭಾರತೀಯ ಮೂಲದ ಬ್ರಿಟಿಷ್ ಶಿಕ್ಷಣ ತಜ್ಞ ಪ್ರೊಫೆಸರ್ ನಿತಾಶಾ ಕೌಲ್ ಅವರು ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿ, "1930ರ ದಶಕದ ಜರ್ಮನಿ ಶೈಲಿಯ ಕಾರ್ಟೂನ್" ಎಂದು ಇದನ್ನು ಬಣ್ಣಿಸಿದ್ದಾರೆ. ನಾಝಿಗಳು ಅಪಪ್ರಚಾರಕ್ಕೆ ಇಂಥ ವಿಡಿಯೊ ಬಳಸುತ್ತಿದ್ದರು. ಇದು ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ವೆಸ್ಟ್ ಮಿನಿಸ್ಟರ್ ವಿವಿಯ ರಾಜಕೀಯ ವಿಭಾಗದ ಪ್ರೊಫೆಸರ್ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.