ಮಾಜಿ ಸಿಎಂಗಳನ್ನು ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಪಡೆದಿದ್ದ ಶಾಸಕ ಮುನಿರತ್ನ: ಸಂತ್ರಸ್ತೆ ಗಂಭೀರ ಆರೋಪ
ಬೆಂಗಳೂರು: ‘ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿ, ಆ ವೀಡಿಯೋಗಳನ್ನು ತೋರಿಸಿ, ಅವರನ್ನು ಬ್ಲಾಕ್‌ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡಿದ್ದರು’ ಎಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕರಣದ ಸಂತ್ರಸ್ತೆ, ಶಾಸಕ ಮುನಿರತ್ನ ‘ನಿನ್ನ ಮಕ್ಕಳನ್ನು ಸಾಯಿಸುತ್ತೇನೆ’ ಎಂದು ಬೆದರಿಸಿ ಹನಿಟ್ರ್ಯಾಪ್ ಮಾಡಿಕೊಂಡಿದ್ದಾರೆ. ಸರಕಾರ ಸೂಕ್ತ ರಕ್ಷಣೆ ನೀಡಿದರೆ ವಿಶೇಷ ತನಿಖಾ ತಂಡ(SIT) ಮುಂದೆ ಈ ಕುರಿತ ದಾಖಲೆಗಳನ್ನು ಬಹಿರಂಗ ಪಡಿಸುತ್ತೇನೆ’ ಎಂದು ತಿಳಿಸಿದರು.
‘ಮುನಿರತ್ನ ನನ್ನೊಂದಿಗೆ ಸಲಿಗೆಯಿಂದ ಮಾತನಾಡುತ್ತಾ, ಯಾಮಾರಿಸಿ, ಬೆದರಿಸಿ, ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ನನಗೆ ಹಲವು ಬಾರಿ ವಿಡಿಯೋ ಕರೆ ಮಾಡಿದ್ದಾರೆ. ಅಲ್ಲದೆ, ಅವರದೆ ಮೊಬೈಲ್ ಫೋನ್‌ನಲ್ಲಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೊ ಮತ್ತು ಅವರ ಮುಖ ಎಡಿಟ್ ಆಗಿರುವ ಅತ್ಯಾಚಾರದ ವಿಡಿಯೊ ತೋರಿಸಿದ್ದರು ಎಂದು ಸಂತ್ರಸ್ತೆ ದೂರಿದರು.
ಮುನಿರತ್ನ ಸಂಬಂಧಿ ಸುಧಾಕರ್ ಎಂಬವರನ್ನು ಕರೆಸಿಕೊಂಡು ಅವರ ಮನೆಯಲ್ಲಿ ಗೊತ್ತಿಲ್ಲದೆಯೇ ಸಿಸಿಟಿವಿ ಕ್ಯಾಮರಾಗಳನ್ನು ಹಾಕಿಸಿಕೊಂಡು, ಸ್ಥಳೀಯ ಕಾರ್ಪೋರೇಟ್‌ರ ಮೇಲೆಯೂ ಅತ್ಯಾಚಾರ ಮಾಡಿದ್ದಾರೆ. ಈ ಕುರಿತು ಹಲವಾರು ಜನರಿಗೆ ವಿಷಯ ಗೊತ್ತಿದೆ. ಆದರೆ, ಯಾರು ಮಾತನಾಡುತ್ತಿಲ್ಲ. ಮುನಿರತ್ನ ನನ್ನ ಸ್ನೇಹಿತರಿಗೆ ಕರೆ ಮಾಡಿ ನಿಮ್ಮ ಮನೆಗೆ ಬೆಂಕಿ ಹಚ್ಚುತ್ತೇನೆಂದು ಬೆದರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದರು.
ಮುನಿರತ್ನ ಜೈಲಿನಲ್ಲಿದ್ದುಕೊಂಡೆ ‘ನಿನ್ನನ್ನು ಕೊಲೆ ಮಾಡಿಸುತ್ತಾನೆ’ ಎನ್ನುವ ಬೆದರಿಕೆ ಕಾರಣಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಸರಕಾರ, ನ್ಯಾಯಾಲಯ ನನಗೆ ಸೂಕ್ತ ರಕ್ಷಣೆ ನೀಡಿದರೆ SIT, ನ್ಯಾಯಾಲಯದ ಮುಂದೆ ಇದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸಂತ್ರಸ್ತೆ ಸ್ಪಷ್ಟಣೆ ನೀಡಿದರು.