ಹನುಮ ಧ್ವಜ ಹಾರಿಸುವವರೆಗೂ ಬಿಜೆಪಿಯಿಂದ ಹೋರಾಟ : ವಿಪಕ್ಷ ನಾಯಕ ಆರ್.ಅಶೋಕ್

Update: 2024-01-30 11:19 GMT

ಬೆಂಗಳೂರು: ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ಹಾರಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರಕಾರ ಇನ್ನಷ್ಟು ಕೆದಕಿದರೆ ಇದು ದೇಶವ್ಯಾಪಿ ಹೋರಾಟವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಗೋಡಿನಲ್ಲಿ 20-30 ವರ್ಷಗಳಿಂದ ಹನುಮ ಧ್ವಜ ಹಾರಿಸಲಾಗುತ್ತಿದೆ. ಯಾವುದೇ ಮಸೀದಿಯ ಬಳಿ ಧ್ವಜ ಹಾರಿಸಿಲ್ಲ. ಪ್ರತಿ ಮನೆಯವರಿಂದ ದೇಣಿಗೆ ಸಂಗ್ರಹಿಸಿ 6 ಲಕ್ಷ ರೂ. ಖರ್ಚು ಮಾಡಿ 108 ಅಡಿ ಸ್ಥಂಭ ನಿರ್ಮಿಸಲಾಗಿದೆ. ಇಡೀ ವರ್ಷ ಅಲ್ಲಿ ಹನುಮ ಧ್ವಜ ಹಾರಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸಲು ಸರಕಾರ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಕ್ಕೆ ಮರ್ಯಾದೆ ಇದ್ದರೆ ಅವರ ಅನುದಾನದಿಂದ ಕಂಬ ನಿರ್ಮಿಸಿ ಧ್ವಜ ಹಾರಿಸಬೇಕಿತ್ತು. ಹನುಮನನ್ನು ಹೇಗೆ ವಿರೋಧ ಮಾಡಬೇಕೆಂದು ಚಿಂತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ. ಈ ಹೋರಾಟ ಇಡೀ ಮಂಡ್ಯ ಜಿಲ್ಲೆಯ ಮನೆಗಳನ್ನು ತಲುಪಲಿದೆ. ಇದು ಅಕ್ರಮವಾಗಿದ್ದರೆ ನೋಟಿಸ್ ಜಾರಿ ಮಾಡಬೇಕಿತ್ತು. ಅದು ನ್ಯಾಯಾಲಯದಲ್ಲಾದರೂ ತೀರ್ಮಾನ ಆಗಬೇಕಿತ್ತು. ಅದನ್ನು ಬಿಟ್ಟು ಲೋಕಸಭಾ ಚುನಾವಣಾ ಲಾಭಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ಹೇಳುವುದು ಸರಿಯಲ್ಲ. ಇಲ್ಲಿ ಧ್ವಜ ಹಾರಿಸುವುದು ಮಂಡ್ಯ ಜಿಲ್ಲೆಯ ಜನರಿಗೂ ಗೊತ್ತಿರಲಿಲ್ಲ ಎಂದಮೇಲೆ ಇದರಿಂದ ಬಿಜೆಪಿಗೆ ಯಾವ ರಾಜಕೀಯ ಲಾಭ ಬರುತ್ತದೆ ಎಂದು ಪ್ರಶ್ನಿಸಿದರು.

ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಪಾಕಿಸ್ತಾನ ಸವಾಲು ಹಾಕಿತ್ತು. ಅನೇಕ ಬಿಜೆಪಿ ನಾಯಕರು ಹೋಗಿ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಕಾಂಗ್ರೆಸ್ ಸರಕಾರ ಲಾಠಿ ಚಾರ್ಜ್ ಮಾಡಿತ್ತು. ಆಗ ರಾಷ್ಟ್ರಧ್ವಜ ಹಾರಿಸಲು ಬಾರದವರು ಈಗ ದೇಶಾಭಿಮಾನ ತೋರುತ್ತಿದ್ದಾರೆ. ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News