ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿಯ ಆರೋಪಗಳು ರಾಜಕೀಯ ಪ್ರೇರಿತ : ಸಿಎಂ ಸಿದ್ದರಾಮಯ್ಯ

Update: 2024-07-04 13:30 GMT
Screengrab : x/@siddaramaiah

ಬೆಂಗಳೂರು : ‘ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು, ಅಂಕಿ-ಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ನಿರಾಕರಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರೆಸೆಸ್ಸ್ ಹೇಳಿದಂತೆ ಮಾಡುತ್ತಾರೆ. ಯಾವುದೇ ವಿಷಯವೇ ಇಲ್ಲ. ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ?. ಹಾಗಿದ್ದಲ್ಲಿ ಜಮೀನಿನ ಮೌಲ್ಯ 60 ಕೋಟಿ ರೂ.ಗಳನ್ನು ಕೊಟ್ಟುಬಿಡಲಿ’ ಎಂದು ಸವಾಲು ಹಾಕಿದರು.

‘ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಮುಡಾದವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು ಶೇ.50ಃ50ರ ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂತಹ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ’ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು.

ಬಿಜೆಪಿ ಅಧಿಕಾರದಲ್ಲಿತ್ತು: ನಮಗೆ ನಿವೇಶನ ನೀಡಿದ ವೇಳೆ(2021) ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3ನೆ ಅಥವಾ 4ನೆ ಹಂತದಲ್ಲಿ ಕೊಡಿ ಎಂದು ಕೇಳಲಿಲ್ಲ. ನಮಗೆ ಪರ್ಯಾಯವಾಗಿ ಶೇ.50ಃ50ರ ಅನುಪಾತದಲ್ಲಿ ಕೊಡಲು ಒಪ್ಪಿದಂತೆ ಕೊಡಿ ಎಂದು ಹೇಳಿದ್ದೇವೆ. ಇದು ರಾಜಕೀಯ ಪ್ರೇರಿತ ಆಪಾದನೆ ಎಂದು ಅವರು ದೂರಿದರು.

ಪರಿಹಾರ ಕೊಡಲಿ: ‘ನಾವು ಇಂತಹ ಕಡೆಯೇ ನಿವೇಶನ ಕೊಡಿ ಎಂದು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. ಅಕ್ಟೋಬರ್ 2023ರಲ್ಲಿ ಸಚಿವರು ಶೇ.50ಃ50ರ ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ 62ಕೋಟಿ ರೂ.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ.

ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನನಗೆ 62 ಕೋಟಿ ರೂ.ಗಳಷ್ಟು ಕೊಟ್ಟುಬಿಡಲಿ. ನಗರಾಭಿವೃದ್ಧಿ ಸಚಿವರು ನಿವೇಶನ ಹಂಚಿಕೆಗೆ ಸಂಬಂಧಿಸಿದ ಯಾವುದೇ ಕಡತ ತಂದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News