‘ಖಾತೆಗಳ ಬ್ಲಾಕ್’ ಸುಪ್ರೀಂ ಆದೇಶಕ್ಕೆ ವಿರುದ್ಧ ʼಎಕ್ಸ್‌ʼ ನಿಂದ ಹೈಕೋರ್ಟ್‍ನಲ್ಲಿ ವಾದ

Update: 2024-01-29 14:23 GMT

ಬೆಂಗಳೂರು: ಸಕಾರಣವನ್ನು ದಾಖಲಿಸದೆ ಮತ್ತು ನಿಯಮಗಳನ್ನು ಪಾಲಿಸದೆ 1,400ಕ್ಕೂ ಹೆಚ್ಚು ಎಕ್ಸ್ ಖಾತೆಗಳನ್ನು ಬ್ಲಾಕ್ ಮಾಡಿರುವುದು ಸುಪ್ರೀಂಕೋರ್ಟ್‍ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಎಕ್ಸ್ ಕಾರ್ಪ್ ಕಂಪೆನಿ ಹೈಕೋರ್ಟ್‍ಗೆ ತಿಳಿಸಿದೆ.

ಕೆಲವು ಖಾತೆಗಳನ್ನು ರದ್ದುಗೊಳಿಸಿದ್ದ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ(ಐಟಿ) ಇಲಾಖೆ ಕ್ರಮ ಮತ್ತು 50 ಲಕ್ಷ ರೂ.ಗಳ ದಂಡ ವಿಧಿಸಿದ್ದ ಏಕ ಸದಸ್ಯ ನ್ಯಾಯಪೀಠದ ಕ್ರಮವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಮೇಲ್ಮನವಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‍ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ಎಕ್ಸ್ ಪರ ವಾದಿಸಿದ ವಕೀಲ ಸಜ್ಜನ್ ಪೂವಯ್ಯ ಅವರು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಲವು ಮಂದಿ ವಿವಿಧ ಮಾಹಿತಿ ಹಂಚಿಕೊಳ್ಳುತ್ತಾರೆ. ಕೇಂದ್ರ ಸರಕಾರ ಮಾಹಿತಿ ತಂತ್ರಜ್ಞಾನ ಕಾಯಿದೆ-2000ದ ಕಲಂ 69ಎ ಅಡಿಯಲ್ಲಿ ಎಕ್ಸ್ ಖಾತೆಗಳನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶವಿದೆ. ಅದನ್ನು ನಾವು ಪ್ರಶ್ನೆ ಮಾಡುತ್ತಿಲ್ಲ. ಆದರೂ, ಅದಕ್ಕೆ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಖಾತೆಗಳ ಬ್ಲಾಕಿಂಗ್ ನಿಯಮ 2009ರ ಪ್ರಕಾರ, ಗೊತ್ತುಪಡಿಸಿದ ಅಧಿಕಾರಿಯು ಖಾತೆಗಳನ್ನು ಬ್ಲಾಕ್ ಮಾಡುವಂತಿರಬೇಕು. ಜತೆಗೆ, ಸೂಕ್ತ ಕಾರಣವನ್ನು ನೀಡಿ ತೆಗೆದು ಹಾಕಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಶ್ರೇಯಾ ಸಿಂಘಾಲ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ಯಾವುದೇ ಖಾತೆಗೆ ನಿರ್ಬಂಧ ವಿಧಿಸಬೇಕಾದಲ್ಲಿ ಸೂಕ್ತ ಕಾರಣವನ್ನು ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ, ಎಕ್ಸ್ ಖಾತೆಗಳಿಗೆ ನಿರ್ಬಂಧ ವಿಧಿಸುವ ಸಂದರ್ಭದಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದಾರೆ.

ಒಂದು ಸಂದರ್ಭದಲ್ಲಿ 1,400 ಖಾತೆಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿತ್ತು. ಅದನ್ನು ಎಕ್ಸ್ ಪಾಲಿಸಿದೆ. ಇದಾದ ಬಳಿಕ ಕಾರಣ ನೀಡುವಂತೆ ಕೇಳಿದರೂ ಅದರ ಅಗತ್ಯವಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಹೀಗಾಗಿ, ಈ ಆದೇಶವನ್ನು ರದ್ದು ಮಾಡಬೇಕು ಎಂದು ಪೀಠಕ್ಕೆ ಕೋರಿದರು.

ಸಾರ್ವಜನಿಕರ ನಿರ್ಬಂಧ ಆದೇಶ ಹೊರಡಿಸುವ ಸಂದರ್ಭದಲ್ಲಿ ಸೂಕ್ತ ಕಾರಣವನ್ನು ದಾಖಲಿಸಬೇಕು. ಅದನ್ನು ಪಾಲಿಸದಿದ್ದಲ್ಲಿ ಮಧ್ಯಸ್ಥಿಕೆ ಸಂಸ್ಥೆ(ಎಕ್ಸ್) ಹೈಕೋರ್ಟ್‍ನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿರಲಿದೆ. ಖಾತೆಗಳನ್ನು ರದ್ದು ಮಾಡಿರುವುದಕ್ಕೆ ರಹಸ್ಯ ಕಾರಣವಿದೆ ಎಂದು ಹೇಳಲಾಗಿದೆ. ಅದು ಏನು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ ಎಂದು ಪೀಠಕ್ಕೆ ಪೂವಯ್ಯ ವಿವರಿಸಿದ್ದಾರೆ.

ಪೂವಯ್ಯ ಅವರ ವಾದಕ್ಕೆ ಪ್ರತಿವಾದ ಮಂಡಿಸಲು ಕೇಂದ್ರ ಸರಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಈ ಅಂಶ ದಾಖಲಿಸಿಕೊಂಡು ನ್ಯಾಯಪೀಠ ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News