ಬಿ.ಎಸ್.ಯಡಿಯೂರಪ್ಪ ಅವರಿಗೆ ‘ಝೆಡ್' ಶ್ರೇಣಿಯ ಭದ್ರತೆ

Update: 2023-10-26 17:02 GMT

ಹೊಸದಿಲ್ಲಿ/ಬೆಂಗಳೂರು, ಅ.26: ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್) ಸಿಬ್ಬಂದಿಯನ್ನು ಒಳಗೊಂಡಿರುವ ‘ಝೆಡ್' ಶ್ರೇಣಿಯ ಭದ್ರತೆ ಕಲ್ಪಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶಿಸಿದೆ.

ಕರ್ನಾಟಕದಲ್ಲಿ ಮಾತ್ರವೇ ಉನ್ನತ ಭದ್ರತೆಯ ಸೌಲಭ್ಯವನ್ನು ಬಿಎಸ್‍ವೈ ಹೊಂದಲಿದ್ದು, ಸಿಆರ್‍ಪಿಎಫ್ ಸಿಬ್ಬಂದಿ ಶೀಘ್ರವೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬಿ.ಎಸ್.ಯಡಿಯೂರಪ್ಪನವರಿಗೆ ಬೆದರಿಕೆ ಇರುವ ಕುರಿತ ಮಾಹಿತಿಯನ್ನು ಆಧರಿಸಿ ಗುಪ್ತಚರ ವಿಭಾಗವು ಕೇಂದ್ರ ಗೃಹ ಇಲಾಖೆಯೊಂದಿಗೆ ಹಂಚಿಕೊಂಡಿದೆ. ಇದರ ಆಧಾರದ ಮೇಲೆ ಕೇಂದ್ರದ ಭದ್ರತೆ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಮೂಲಭೂತವಾದಿ ಗುಂಪುಗಳಿಂದ ಬಿ.ಎಸ್.ಯಡಿಯೂರಪ್ಪ ಅವರು ಅಪಾಯ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಅವರು ಸಂಚರಿಸುವ ಎಲ್ಲೆಡೆಯೂ ಸಿಆರ್‍ಪಿಎಫ್ ಸಿಬ್ಬಂದಿಗಳು ಭದ್ರತೆ ಒದಗಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನತೆಯೆದುರು ಎತ್ತಿ ತೋರಿಸಲು ಹಾಗೂ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶೀಘ್ರವೇ ಪಕ್ಷದ ಇತರೆ ನಾಯಕರೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಇತ್ತೀಚೆಗೆ ಬಿಎಸ್‍ವೈ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ, ಕೇಂದ್ರ ಸರಕಾರ ಭದ್ರತೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News