ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನ: ಎಚ್.ಕೆ ಪಾಟೀಲ್
ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನು ಫೆಬ್ರವರಿಯಲ್ಲಿ ನಡೆಸಲು ಚರ್ಚಿಸಲಾಗಿದ್ದು, ದಿನಾಂಕ ನಿಗದಿ ಮಾಡುವ ಅಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಬೆಳಗಾವಿಯಲ್ಲಿ ಕರೆಯಲಾದ ವಿಧಾನಮಂಡಲದ ಅಧಿವೇಶವನ್ನು ಸಮಾಪನ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಜೊತೆಗೆ, ಬಜೆಟ್ ಅಧಿವೇಶನವನ್ನು ಫೆಬ್ರವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ, ಅದರೆ ದಿನಾಂಕ ನಿಗದಿ ಆಗಿಲ್ಲ ಎಂದು ಹೇಳಿದರು.
ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನ ಯೋಜನೆಯಡಿ ಮಂಗಳೂರು ನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ 24/7 ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂ.ಎಲ್.ಡಿ ನೀರು ಶುದ್ಧೀಕರಣ ಘಟಕವನ್ನು 127.70 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.